ಬಂಟ್ವಾಳ: ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಬಸ್’ನಿಂದ ಹಾರಿದ ಆರೋಪಿ
ಬಂಟ್ಚಾಳ;ಕಳ್ಳತನ ಪ್ರಕರಣದ ಆರೋಪಿಯನ್ನು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಂಗಳೂರು ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಪೊಲೀಸರನ್ನು ತಳ್ಳಿ ಬಸ್ ನಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಾರ್ವಜನಿಕರ ಸಹಾಯದಿಂದ ಪೊಲೀಸರು ಆತನನ್ನು ಹಿಡಿದು ಜೈಲಿಗಟ್ಟಿದ ಘಟನೆ ನವಂಬರ್ 2ರಂದು ಸಂಜೆ ವರದಿಯಾಗಿದೆ.

2003ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕಳ್ಳಿಗೆ ನಿವಾಸಿ ಗಿರೀಶ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯದ ಅದೇಶದಂತೆ ಪೋಲೀಸರು ಈತನನ್ನು ಪತ್ತೆ ಹಚ್ಚಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯ ಈತನಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಶಿಕ್ಷಾ ಕೈದಿಯನ್ನು ಸರ್ಕಾರಿ ಬಸ್ ನಲ್ಲಿ ಇಬ್ಬರು ಪೋಲೀಸರು ಬಿ ಸಿ ರೋಡಿನಿಂದ ಮಂಗಳೂರಿಗೆ ಸುಮಾರು 6.30 ರ ಸಮಯದಲ್ಲಿ ಕರೆದುಕೊಂಡು ಹೋಗುವ ವೇಳೆ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಬಸ್ ನಿಧಾನವಾಗುತ್ತಿದ್ದಂತೆ, ಪೋಲೀಸರನ್ನು ಬಸ್ ನೊಳಗೆ ದೂಡಿ ಹಾಕಿ ಬಸ್ ನಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತ ಪೋಲೀಸರು ಆರೋಪಿಯನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಈತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.