ಕರಾವಳಿರಾಜಕೀಯರಾಜ್ಯ

ಪುತ್ತೂರು ಶಾಸಕ ಅಶೋಕ್ ರೈಗೆ ಒಲಿಯುತ್ತಾ ಸಚಿವ ಸ್ಥಾನ?

ಪುತ್ತೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್
ಸುರ್ಜೇವಾಲ ಅವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಕರೆ ಮಾಡಿ ಜು.1ಕ್ಕೆ ಭೇಟಿಯಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಬೆಂಗಳೂರುಗೆ ತೆರಳಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಜೂ.30ರಂದು ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ ಅವರ ಖುದ್ದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ.

ಪಕ್ಷದ ಕೆಲ ಶಾಸಕರು ಕೆಲವು ವಿಚಾರಗಳಲ್ಲಿ ಸ್ವಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಇದರ ಶಮನಕ್ಕಾಗಿ ಪಕ್ಷದ ಉಸ್ತುವಾದಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಜೂನ್ 30ರಿಂದ ಮೂರು ದಿನ ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಪಕ್ಷದ ಸಂಘಟನೆ ಅವರವರ ಕ್ಷೇತ್ರಗಳಲ್ಲಿ ಯಾವ ರೀತಿ ನಡೆಯುತ್ತಿದೆ.ಪಕ್ಷದ ಮುಂಚೂಣಿ ಘಟಕಗಳ ಕಾರ್ಯವೈಖರಿಯ ಬಗ್ಗೆ ಹಾಗು ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಯಾವ ಮಟ್ಟದಲ್ಲಿ ಆಗುತ್ತಿದೆ ಮತ್ತು ಸರಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ಶಾಸಕರಿಂದ ಮಾಹಿತಿ ಪಡೆಯಲು ತಾನು ರಾಜ್ಯಕ್ಕೆ ಬಂದಿರುವುದಾಗಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ನಡುವೆ ಜೂ.30ರಂದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಉಸ್ತುವಾರಿಯವರೇ ಖುದ್ದು ಕರೆ ಮಾಡಿ ಜು.1ಕ್ಕೆ ಭೇಟಿಯಾಗುವಂತೆ ತಿಳಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ತಮ್ಮ ಕಾರ್ಯ ವೈಖರಿ ಮೂಲಕ ರಾಜ್ಯದ ಗಮನ ಸೆಳೆದಿರುವ ಅಶೋಕ್ ಕುಮಾರ್ ರೈ ಅವರಿಗೆ ಶೀಘ್ರದಲ್ಲೇ ಸಚಿವ ಸ್ಥಾನ ಒಲಿದು ಬರಲಿದೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಶಾಸಕ ಅಶೋಕ್ ರೈಯವರ ಕಾರ್ಯವೈಖರಿ ಬಗ್ಗೆ ಈ ಹಿಂದೆ ಸುರ್ಜೆವಾಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿಎಂ, ಡಿಸಿಎಂ ಕೂಡಾ ಅಶೋಕ್ ರೈ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂದೂ ಹೇಳಲಾಗುತ್ತಿದೆ. ಸಚಿವ ಸ್ಥಾನ ಇಲ್ಲವೇ ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಅಥವಾ ಕರಾವಳಿ ಪ್ರಾಧಿಕಾರದ ಪಟ್ಟದಲ್ಲಿ ಯಾವುದಾದರೊಂದು ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!