ಕರಾವಳಿ

ಇಡೀ ದೇಶವೇ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಹಿಂದೆ ಬಿದ್ದಿದೆ- ಅಶೋಕ್ ರೈ



ಪುತ್ತೂರು: ಇಂದು ಇಡೀ ದೇಶವೇ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಯ ಹಿಂದೆ ಬಿದ್ದಿದೆ. ಬಡವರು ಬಡವರಾಗಿ ಇರುವುದು ಬೇಡ, ಬಡವರೂ ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಬಡ ಕುಟುಂಬಗಳಲ್ಲಿ ಸಂತೋಷದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಾ.7ರಂದು ನಡೆದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಡತನದಿಂದ ಬಂದಿರುವ ಸಿದ್ದರಾಮಯ್ಯರಿಗೆ ಬಡವರ ಬಗ್ಗೆ ಗೊತ್ತಿದೆ, ಹಾಗಾಗಿ ಬಡವರ ಪರವಾಗಿ ಅವರು ಅದ್ಭುತ ಯೋಜನೆ ಜಾರಿಗೆ ತಂದಿದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಯಾವ ಮಹಿಳೆಯರು ಕೂಡಾ ವಿರೋಧಿಸುತ್ತಿಲ್ಲ, ಎಲ್ಲಾದರೂ ಒಂದು ಪರ್ಸಂಟ್ ಜನರು ವಿರೋಧಿಸುವವರಿದ್ದರೆ ಅದು ನಂಜು ಕಾರುವವರು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವವರೆಗೆ ಈ ಗ್ಯಾರಂಟಿ ಯೋಜನೆ ಇದ್ದೇ ಇರುತ್ತದೆ. 98% ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ರೂ.2000 ಸಿಗುತ್ತಿದೆ, 2% ಜನರಿಗೆ ತಾಂತ್ರಿಕ ಸಮಸ್ಯೆಯಿಂದ ಕೊಡಲು ಅನಾನುಕೂಲವಾಗಿದೆ, ಅದನ್ನೂ ನಿವಾರಿಸಿಕೊಂಡು ಅವರಿಗೂ ಸಿಗುವ ಹಾಗೆ ಶೀಘ್ರದಲ್ಲೇ ಮಾಡುತ್ತೇವೆ ಎಂದು ಅವರು ಹೇಳಿದರು.

ಪ್ರತೀ ಬಡ ಕುಟುಂಬ ಉದ್ದಾರ ಆಗಬೇಕು, ಮಹಿಳೆಯರು ಸಬಲೀಕರಣ ಆಗಬೇಕು ಎನ್ನುವ ಉದ್ದೇಶಕ್ಕೆ ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಕಿಲ್ಲೆ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!