ಸುಳ್ಯ ಕಾಂಗ್ರೆಸ್: ದೈವದ ಮೊರೆ ಹೋದ ಉಚ್ಚಾಟನೆಗೊಂಡ ಮುಖಂಡರು
ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ಕೆಲವು ಮುಖಂಡರು ದೈವದ ಮೊರೆ ಹೋಗಿ ಚುನಾವಣಾ ಸಂದರ್ಭದಲ್ಲಿ ತಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ ಎಂದು ದೈವದ ಮುಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸೋತಿರುವ ಜಿ.ಕೃಷ್ಣಪ್ಪ ಅವರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ದೈವದ ಮುಂದೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ಕ್ಷೇತ್ರಕ್ಕೆ ತೆರಳಿ ಹರಕೆ ಹೇಳಿರುವ ಮುಖಂಡರುಗಳು ಪ್ರಸಿದ್ಧ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಹರಕೆ ಹೇಳಿದ್ದು,ತಮ್ಮನ್ನು ಪಕ್ಷದಿಂದ ಪಕ್ಷ ವಿರೋಧಿ ನೆಪ ಹೇಳಿ ಉಚ್ಛಾಟನೆ ಮಾಡಲಾಗಿದ್ದು, ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಓಟಿಗೆ ನಿಂತು ಪರಾಜಿತಗೊಂಡಿರುವ ಜಿ.ಕೃಷ್ಣಪ್ಪ ಅವರ ಮಾತನ್ನು ಕೇಳಿ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ದೈವದ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ ಕೃಷ್ಣಪ್ಪ ಅವರು ಕೂಡ ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.
ಈ ವಳೆ ಮಾತನಾಡಿರುವ ಮುಖಂಡರುಗಳು ನಾವು ನಂದಕುಮಾರ್ ಅವರನ್ನು ಬೆಂಬಲಿಸಿದ್ದರಲ್ಲಿ ತಪ್ಪು ಏನಿದೆ.ಅವರೇನು ಕಾಂಗ್ರೆಸ್ ಪಕ್ಷದ ವ್ಯಕ್ತಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಂದಕುಮಾರ್ ಅವರನ್ನು ಬೆಂಬಲಿಸಿದ್ದೇವೆ ಎನ್ನುವ ಕಾರಣದಿಂದ ನಮ್ಮನ್ನು ಪಕ್ಷ ವಿರೋಧಿಗಳು ಎಂದು ಹೇಳಲಾಗುತ್ತಿದೆ.ಕಡಬ ತಾಲೂಕಿನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆ.ಪಕ್ಷಕ್ಕಾಗಿ ನಾವು ಹಗಲಿರುಳೆನ್ನದೆ ಕೆಲಸ ಮಾಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಉಷಾ ಅಂಚನ್,ಆಶಾ ಲಕ್ಷ್ಮಣ್ ಎಂಬವವರು ದೈವದ ಮೊರೆ ಹೋಗಿ ದೈವದ ಮುಂದೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಸುಳ್ಯದ ಕಾಂಗ್ರೆಸ್ ಪಕ್ಷದ ರಾಜಕೀಯ ಬೇರೆ ಬೇರೆ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.