ಕೊಡಗು: ಕಾರಿಗೆ ಲಾರಿ ಡಿಕ್ಕಿ; ಮಹಿಳೆ ಮೃತ್ಯು-ಇಬ್ಬರಿಗೆ ಗಾಯ
ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮದ ಗದ್ದೆಹಳ್ಳ ಬಳಿ ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲಿ ಮೃತಪಟ್ಟು ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಗದ್ದೆಹಳ್ಳ ವಂದನಾ ಬಾರ್ ಸಮೀಪ ಅವಘಡ ಸಂಭವಿಸಿ ಮುಂಬೈ ಮೂಲದ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದೆ.
ಮಡಿಕೇರಿ ಕಡೆಯಿಂದ ಸುಂಟಿಕೊಪ್ಪದತ್ತ ಬರುತ್ತಿದ್ದ ಕಾರು ಮತ್ತು ಸುಂಟಿಕೊಪ್ಪದಿಂದ ಮಡಿಕೇರಿ ಯತ್ತ ತೆರಳುತ್ತಿದ್ದ ಲಾರಿಯ ನಡುವೆ ಈ ಘಟನೆ ಸಂಭವಿಸಿದೆ.
ಕಾರಿನಲ್ಲಿದ್ದ ಮಹಿಳೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು,ಆಕೆಯ ಪತಿ ಮತ್ತು ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.