ಸರ್ವ ಧರ್ಮಿಯರ ಪಾಲ್ಗೊಳ್ಳುವಿಕೆ: ಸೌಹಾರ್ದದ ಸಂದೇಶದೊಂದಿಗೆ ಅಜಿಲಮೊಗರು ಮಾಲಿದಾ ಉರೂಸ್ ಸಂಪನ್ನ
✍🏻 ಎನ್.ಆರ್
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಜಿಲ್ಲೆಯ ಜೀವನದಿ ನೇತ್ರಾವತಿಯ ದಡದಲ್ಲಿ ಹಚ್ಚ-ಹಸಿರಿನ ಪ್ರಕೃತಿ ರಮಣೀಯತೆಯಿಂದ ಕಂಗೂಳಿಸುವ ಅಜಿಲಮೊಗರಿನಲ್ಲಿ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ರವರ ‘ಮಾಲಿದಾ ಉರೂಸ್ ಜ.4ರಿಂದ ಆರಂಭಗೊಂಡು ಜ.8ರಂದು ಸಂಪನ್ನಗೊಂಡಿದೆ.
ಕರ್ನಾಟಕದಲ್ಲೇ ಅತ್ಯಂತ ಪುರಾತನ ಕೇಂದ್ರವೆಂದು ಗುರುತಿಸಿಕೊಂಡಿರುವ ಹಝ್ರತ್ ಬಾಬಾ ಫಕ್ರುದ್ದೀನ್‌ರವರ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಾಲಿದಾ ಉರೂಸ್ ಕಾರ್ಯಕ್ರಮಕ್ಕೆ ಸರ್ವಧಮೀಯರ ಪಾಲ್ಗೊಳ್ಳುವಿಕೆ, ಸಹಕಾರ, ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಮತ್ತಷ್ಟು ವಿಶೇಷ ಮೆರಗು ನೀಡಿದೆ.
ಜೀವಂತ ಸೌಹಾರ್ದತೆಗೆ ಸಾಕ್ಷಿಯಾಗಿರುವ 2 ಕ್ಷೇತ್ರ: ಅಜಿಲಮೊಗರುನಲ್ಲಿ ವರ್ಷಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮಾಲಿದಾ ಉರೂಸ್‌ಗೆ ಸರ್ವ ಧರ್ಮೀಯರ ಒಗ್ಗೂಡುವಿಕೆ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ. ನದಿಯ ಒಂದು ದಡದಲ್ಲಿ ಕಡೇಶಿವಾಲಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನ ಇನ್ನೊಂದು ಡದದಲ್ಲಿ ನೇರಕ್ಕೆ ಅಜಿಲಮೊಗರು ಮಸೀದಿಯಿದೆ. ಈ ಊರನಲ್ಲಿ ಬೆಳೆಸಿದ ಫಲ ವಸ್ತುಗಳಾದ ಭತ್ತ, ಅಡಿಕೆ, ತರಕಾರಿ, ತೆಂಗಿನಕಾಯಿ- ಹಣ್ಣು ಹಂಪಲುಗಳ ಮೊದಲ ಬೆಳೆ, ದನದ ಮೊದಲ ಹಾಲನ್ನು ಇಲ್ಲಿನ ಸರ್ವಧರ್ಮೀಯರು ಮಸೀದಿಗೆ ಸಮರ್ಪಿಸುತ್ತಿರುವುದು ಈಗಲೂ ಮುಂದುವರಿದಿದೆ.
ಮೊಗರು ಗುತ್ತುವಿನಿಂದ ದೈವದ ಭಂಡಾರ ಇತರ ಉಪಗುತ್ತುಗಳಿಗೆ ಹೋಗುವಾಗ ಅಜಿಲಮೊಗರು ಮಸೀದಿಯ ಮೆಟ್ಟಿಲಲ್ಲಿ ದೀಪ ಹಚ್ಚಿಡಬೇಕು. ಆ ದೀಪ ಆರದಂತೆ ಭಂಡಾರ ಮರಳಿ ಬರುವವರೆಗೂ ನೋಡಿಕೊಳ್ಳಬೇಕಾಗಿರುವ ಎರಡು ಕ್ಷೇತ್ರದ ಭಾವೈಕ್ಯತೆ, ಸೌಹಾರ್ದತೆಯ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಕಡೇಶಿವಾಲಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಮಸೀದಿಯಿಂದ ಎಣ್ಣೆ ಕೊಡಲಾಗುತ್ತದೆ. ಉರೂಸ್ ನಡೆಯುವಾಗ ದೇವಳದಿಂದ ಅಕ್ಕಿ, ಬೆಲ್ಲ, ತುಪ್ಪ ಮಸೀದಿಗೆ ಕೊಡುವ ಈ ಕೊಂಡುಕೊಳ್ಳುವಿಕೆ ಈಗಲೂ ಪ್ರಸ್ತುತವಾಗಿದೆ.
ಸರ್ವಧರ್ಮಿಯರಿಗೂ ಅವಕಾಶ: ಕರಾವಳಿ ಜಿಲ್ಲೆಯಲ್ಲಿ ಪ್ರಸ್ತುತ ಕಾಲದಲ್ಲಿ ಜಾತ್ರೆಗಳಲ್ಲಿ ಅನ್ಯಧರ್ಮಿಯರಿಗೆ ಅಂಗಡಿ ಹಾಕಲು ಅವಕಾಶ ನೀಡದಂತೆ ಬ್ಯಾನರ್‌ಗಳು ಹಾಕುತ್ತಿದವರಿಗೆ ಅಜಿಲಮೊಗರು ಮಾಲಿದಾ ಉರೂಸ್ ಮಾದರಿಯಾಗಿದೆ. ಪ್ರತಿ ವರ್ಷದಿಂದ ಸರ್ವಧರ್ಮಿರಿಗೂ ಇಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಲು ಮುಕ್ತ ಅವಕಾಶವನ್ನು ಆಡಳಿತ ಸಮಿತಿ ನೀಡಿರುವುದು ಸೌರ್ಹಾದತೆಯನ್ನು ಎತ್ತಿ ಹಿಡಿದ್ದಾರೆ. ದರ್ಗಾದ ಪಕ್ಕದಲ್ಲಿ ಅಂದರೆ ಪ್ರವೇಶ ದ್ವಾರದ ಬಳಿಯೇ ಅನ್ಯ ಧರ್ಮೀಯ ಬಾಂಧವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಇಲ್ಲಿನ ಆಡಳಿತ ಕಮಿಟಿಯವರು ಸೌಹಾರ್ದತೆಯ ಹೃದಯ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದ್ದಾರೆ. ದರ್ಗಾಕ್ಕೆ ಬರುವ ಭಕ್ತಾದಿಗಳು ಕೂಡ ಯಾವುದೇ ನಿರ್ಬಂಧವನ್ನು ಹೇರದೆ ವಲಿಯ್ಯ್ ಅವರ ದರ್ಗಾ ದರ್ಶನ ಮಾಡಲೂ ಅವಕಾಶ ಕಲ್ಪಿಸಲಾಗಿದೆ.
ಮಾಲಿದಾ ವಿತರಣೆ: ಕರಾವಳಿಯ ಬಹುತೇಕ ಮನೆಗಳಲ್ಲಿ ಹಾಗೂ ಹೊರ ಜಿಲ್ಲೆಯ ಕೆಲವು ಕಡೆಗಳಿಂದ ಅಜಿಲಮೊಗರು ಉರೂಸ್‌ನ ಸಮಯದಲ್ಲಿ ಶ್ರದ್ಧೆ, ಭಕ್ತಿಯಿಂದ ಮಾಲಿದಾ ತಯಾರಿಸಿ ಅಜಿಲಮೊಗರಿಗೆ ತಲುಪಿಸುತ್ತಾರೆ. ‘ಮಾಲಿದಾ ಅರೆಬೀಕ್ ಭಾಷೆಯಲ್ಲಿ ರೋಗದ ಶಮನಕ್ಕಿರುವ ಮದ್ದು ಎಂಬರ್ಥವನ್ನು ನೀಡುತ್ತದೆ. ಮಾಲಿದಾವನ್ನು ಬಾಬಾರವರು ತಯಾರಿಸುತ್ತಿದ್ದರು, ಅತ್ಯಂತ ಪ್ರಿಯವಾದ ತಿನಿಸು ಇದಾಗಿತ್ತು. ಬೆಳ್ತಿಗೆ ಅಕ್ಕಿಯನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ, ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡುತ್ತಾರೆ. ಆ ಹಿಟ್ಟಿನಲ್ಲಿ ದಪ್ಪನೆಯ ರೊಟ್ಟಿಗಳನ್ನು ಮಾಡಿ ಬೆಂಕಿಯಲ್ಲಿ ಕಾಯಿಸಲಾಗುತ್ತದೆ, ಬಳಿಕ ರೊಟ್ಟಿಯನ್ನು ತುಪ್ಪ ಮತ್ತು ಬೆಲ್ಲ ಬೆರೆಸಿ ಮತ್ತೆ ಕುಟ್ಟಿ ಹುಡಿ ಮಾಡಲಾಗುತ್ತದೆ. ಈ ಹುಡಿ ಮಾಲಿದಾ. ಮೊದಲ ದಿನದ ತರ್ರುಕ್ (ಪ್ರಸಾದ) ಮಸೀದಿಯಲ್ಲಿಯೇ ತಯಾರಿಸಲಾಗುತ್ತದೆ. ಉಳಿದೆರಡು ದಿನಗಳಲ್ಲಿ ಭಕ್ತರು ಮನೆಯಲ್ಲಿ ಮಾಡಿ ತಂದು ಒಪ್ಪಿಸಿದ ಮಾಲಿದಾವನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ಸಿಗುವ ಪ್ರಸಾದವಾಗಿದ್ದೂ, ಇದನ್ನು ಬೇಕೆಂದಾಗಲೆಲ್ಲ ತಯಾರಿಸಲಾಗುವುದಿಲ್ಲ ಅಲ್ಲದೇ ಮಾಲಿದಾ ಮಾಡುವಾಗ ಕಟ್ಟುನಿಟ್ಟಾಗಿ ನಿರ್ವಹಿಸುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ.
ಮರದಲ್ಲಿ ಸಕ್ಕರೆ ಬೆಳೆಯುತ್ತಿತ್ತು..! ಮಸೀದಿಯ ಮುಂಭಾಗದಲ್ಲಿ ಇರುವ ದರ್ಗಾದ ಬಳಿ ಒಣಹೋಗಿರುವ ಮರದಲ್ಲಿ ಬಾಬಾ ಫಕ್ರುದ್ದೀನ್ ಔಲಿಯಾ ರವರ ಕಾಲದ ದಿನಗಳಲ್ಲಿ ಸಕ್ಕರೆಯ ರೂಪದ ಸಿಹಿಯಾದ ವಸ್ತು ಬೆಳೆಯುತ್ತಿತ್ತು, ಸಿಹಿಯಾದ ವಸ್ತುವನ್ನು ತನ್ನ ಬಳಿಗೆ ಬರುವ ಜನರಿಗೆ ಬಾಬಾರವರು ವಿತರಿಸುತ್ತಿದ್ದರು. ಬಾಬಾರ ಕಾಲದ ಬಳಿಕವೂ ಮರದಲ್ಲಿ ಸಕ್ಕರೆ ಬೆಳೆಯುತ್ತಿತ್ತು, ಕ್ರಮೇಣ ಕಾರಣಾಂತರಗಳಿಂದ ಸಕ್ಕರೆ ಬೆಳೆಯುವುದು ನಿಂತಿತ್ತು, ಈಗಲೂ ಸಹ ಈ ಮರವನ್ನು ಸಕ್ಕರೆಯ ಮರ ಎಂದೇ ಕರೆಯುತ್ತಾರೆ.
ಅಜಿಲಮೊಗರಿಗೆ ನೀವೂ ಹೋಗಬೇಕೆಂದರೆ… ಕಾರಣಿಕತೆಯ, ಸೌರ್ಹಾದತೆಗೆ ಹೆಸರಾಗಿರುವ ಅಜಿಲಮೊಗರು ಮಂಗಳೂರಿನಿಂದ 35 ಕಿಲೋಮೀಟರ್ ದೂರದಲ್ಲಿದೆ, ಬಂಟ್ವಾಳದಿಂದ 14 ಕಿಲೋ ಮೀಟರ್ ಸಾಗಿದರೆ ಅಜಿಲಮೊಗರು ತಲುಪುತ್ತೀರಿ. ಪುತ್ತೂರು ಕಡೆಯಿಂದ ಬರುವವರು ಗಡಿಯಾರ್ ಮಾರ್ಗವಾಗಿ ಕಡೇಶಿವಾಲಯಕ್ಕೆ ಬಂದರೆ ನೇತ್ರಾವತಿ ನದಿ ದಾಟಿ ಅಜಿಲಮೊಗರು ತಲುಪಬಹುದು. ಉಪ್ಪಿನಂಗಡಿಯ ಮೂಲಕ ಬರಬೇಕಾದರೆ ಕೇವಲ 12 ಕಿಲೋ ಮೀಟರ್, ಪ್ರಯಾಣಿಸಿದರೆ ಸಾಕು. ಬಂಟ್ವಾಳ ಮಣಿಹಳ್ಳ ರಸ್ತೆ, ವಗ್ಗ ಕಾರಿಂಜ ರಸ್ತೆ, ಮಡಂತ್ಯಾರು ಪಾಂಡವರಕಲ್ಲು, ಕಕ್ಯಪದವು ಹೆಗ್ಗಣಗುಳಿ ರಸ್ತೆ, ಮಾಣಿ ಗಡಿಯಾರ್ ಕಡೇಶಿವಾಲಯ ರಸ್ತೆ, ಬೆಳ್ತಂಗಡಿ ಉಪ್ಪಿನಂಗಡಿ ರಸ್ತೆಯ ಮೂಲಕ ಈ ಕ್ಷೇತ್ರಕ್ಕೆ ತಲುಪಬಹುದು.