ಜಾತಿ, ಧರ್ಮ, ಪಕ್ಷ ನೋಡದೆ ಎಲ್ಲರಿಗೂ ಕಾರ್ಯಕರ್ತರು ನೆರವಾಗಬೇಕು: ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಎಂದೂ ಕೋಮುವಾದವನ್ನು ಮಾಡುವುದಿಲ್ಲ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುವುದಿಲ್ಲ, ಅಭಿವೃದ್ದಿಯೋಂದೇ ಕಾಂಗ್ರೆಸ್ ಧ್ಯೇಯವಾಗಿದ್ದು ಪಕ್ಷದ ಯುವ ಕಾರ್ಯಕರ್ತರು ಜಾತಿ, ಧರ್ಮ , ಪಕ್ಷ ನೋಡದೆ ಸಮಾಜದ ಪ್ರತೀಯೊಬ್ಬರಿಗೂ ನೆರವು ನೀಡಬೇಕು ಅ ಮೂಲಕ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಶಾಸಕರ ಸಭಾಂಗಣದಲ್ಲಿ ನಡೆದ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನೆಮ್ಮದಿಯ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಜನತೆಗೆ ನೀಡಿದ ಯದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ತಲುಪಿದೆ, ಪ್ರತೀಯಬ್ಬರೂ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಕಾಂಗ್ರೆಸ್‌ನಿಂದ ಮಾತ್ರ ಜನಪರ ಯೋಜನೆಗಳು ಸಾಧ್ಯ ಎಂಬುದು ಜನರಿಗೆ ಮನದಟ್ಟಾಗಿದೆ ಕಾಂಗ್ರೆಸ್ ಕಾರ್ಯಕರ್ತರು ಜನರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕೆಲಸವನ್ನು ಮಾಡಬೇಕು. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಅಧಿಕಾರಕ್ಕೇರುವ ಬಿಜೆಪಿಯವರ ಕೋಮು ರಾಜಕೀಯಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಇತಿಶ್ರೀ ಹಾಡಬೇಕು ಎಂದು ಹೇಳಿದರು.
ಊರಿನ ದೇವಸ್ಥಾನ, ದೈವಸ್ಥಾನ, ಮಂದಿರ, ಮಸೀದಿಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಸಮರೋಪಾದಿಯಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡಿದರೆ ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಸಲು ಸಾಧ್ಯವಾಗುತ್ತದೆ. ಉಚಿತ ವೈದ್ಯಕೀಯ ಶಿಬಿರ, 94 ಸಿ 94 ಸಿಸಿ, ಅಕ್ರಮ ಸಕ್ರಮವನ್ನು ಮಾಡಿಸಿಕೊಡುವುದು ಸೇರಿದಂತೆ ಮನೆ ಇಲ್ಲದ, ಅನಾರೋಗ್ಯ ಪೀಡಿತ ಕುಟುಂಬವನ್ನು ಭೇಟಿಯಾಗಿ ಅವರಿಗೆ ನೆರವು, ಸಾಂತ್ವನ ನೀಡುವ ಕೆಲಸ ಯುವಕರಿಂದ ಆಗಬೇಕು ಎಂದ ಶಾಸಕರು ಇದಕ್ಕೆ ಬೇಕಾದ ಎಲ್ಲಾ ನೆರವುಗಳನ್ನು ನೀಡಲು ಶಾಸಕನೆಂಬ ನೆಲೆಯಲ್ಲಿ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಿದರು.