ಬಜರಂಗದಳ ಮುಖಂಡನ ಮೇಲೆ ತಳವಾರು ದಾಳಿ ಪ್ರಕರಣಕ್ಕೆ ಟ್ವಿಸ್ಟ್: ಸುನಿಲ್ ಒಂದು ವರ್ಷದಿಂದ ನನ್ನ ಹಿಂದೆ ಬಿದ್ದಿದ್ದ- ಪತ್ರಿಕಾಗೋಷ್ಠಿಯಲ್ಲಿ ಸಮೀರ್ ಸಹೋದರಿ ಕಣ್ಣೀರು
ಶಿವಮೊಗ್ಗ ಜಿಲ್ಲೆಯ ಸಾಗರದ ಬಜರಂಗದಳ ಸಹ ಸಂಚಾಲಕ ಸುನೀಲ್ ಮೇಲೆ ಸಮೀರ್ ಎಂಬವರು ತಳವಾರು ದಾಳಿಗೆ ಯತ್ನಿಸಿದ್ದು ಪೊಲೀಸರು ಸಮೀರ್ ನನ್ನು ಬಂಧಿಸಿದ್ದಾರೆ. ಕೋಮು ವೈಷಮ್ಯ ಎನ್ನಲಾಗುತ್ತಿದ್ದ ಈ ಪ್ರಕರಣ ತಿರುವು ಪಡೆದುಕೊಂಡಿದ್ದು ಘಟನೆಗೆ ನೈಜ ಕಾರಣ ಗೊತ್ತಾಗಿದೆ.
ಸುನೀಲ್, ಸಮೀರ್ ತಂಗಿಯನ್ನು ಚುಡಾಯಿಸಿದ್ದರಿಂದ ಸಮೀರ್ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಆರೋಪಿ ಸಮೀರ್ ಸಹೋದರಿ ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕಿದ್ದು ಭಜರಂಗದಳ ಕಾರ್ಯಕರ್ತ ಸುನೀಲ್ ನೀಡುತ್ತಿದ್ದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.
ಸಾಗರದಲ್ಲಿ ಆರೋಪಿ ಸಮೀರ್ ಸಹೋದರಿ ಮತ್ತು ಸಂಬಂಧಿಕರು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ್ದು ಸುನೀಲ್ ಕಳೆದ ಒಂದು ವರ್ಷದಿಂದ ನನ್ನ ಹಿಂದೆ ಬಿದ್ದಿದ್ದ. ಹಿಜಾಬ್ ಗಲಾಟೆ ಆದಾಗಿನಿಂದ ನನ್ನನ್ನು ಚುಡಾಯಿಸುತಿದ್ದ. ನನಗೆ ಬೆದರಿಕೆ ಹಾಕಿದ್ದ ಎಂದು ಆರೋಪ ಮಾಡಿದ್ದಾರೆ.
ನನ್ನನ್ನು ಬುರ್ಕಾ ತೆಗೆಯುವಂತೆ ಒತ್ತಾಯಿಸುತ್ತಿದ್ದ. ಜೊತೆಗೆ ಹಿಂದು ಧರ್ಮಕ್ಕೆ ಮತಾಂತರವಾಗುವಂತೆಯೂ ಒತ್ತಾಯಿಸುತಿದ್ದ. ಸುನೀಲ್ ನನ್ನನ್ನು ಚುಡಾಯಿಸುತ್ತಿದ್ದಾನೆ ಎಂದು ನಾನು ನನ್ನ ಅಣ್ಣ ಸಮೀರ್ ಗೆ ತಿಳಿಸಿದ್ದೆ. ಈ ಬಗ್ಗೆ ಸಮೀರ್ ಹಾಗೂ ಸುನೀಲ್ ಜಗಳವಾಡಿಕೊಂಡಿರಬಹುದು. ಈ ವೇಳೆ ಹುಲ್ಲು ಕೊಯ್ಯಲು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಮಚ್ಚನ್ನು ಹೆದರಿಸುವ ಉದ್ದೇಶದಿಂದ ಬೀಸಿರಬಹುದು. ಆದರೆ ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ. ನನ್ನ ಅಣ್ಣ ಸಮೀರ್‌ನನ್ನು ಬಿಟ್ಟುಬಿಡಿ ಎಂದು ಸಮೀರ್ ಸಹೋದರಿ ಕಣ್ಣೀರು ಹಾಕಿದ್ದಾರೆ.
ನನ್ನ ಅಣ್ಣ ಕೊಲೆ ಮಾಡುವ ಉದ್ದೇಶದಿಂದ ಮಚ್ಚನ್ನು ಬೀಸಿಲ್ಲ. ಹೆದರಿಸುವ ಉದ್ದೇಶದಿಂದ ಮಚ್ಚನ್ನು ಬೀಸಿರಬಹುದು. ಅಣ್ಣನನ್ನು ಬಿಟ್ಟು ಬಿಡಿ ಎಂದು ಅವರು ಮನವಿ ಮಾಡಿದ್ದಾರೆ.