ಕರಾವಳಿ

ಸುಳ್ಯ: ಮಂಡೆಕೋಲುನಲ್ಲಿ ಕಳೆದ 24 ಗಂಟೆಯಲ್ಲಿ 211.5 ಮಿ.ಮೀ ಮಳೆ

ಕರಾವಳಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶದ ಪಟ್ಟಿಗೆ ಸೇರ್ಪಡೆ

ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಬೆಳಗ್ಗೆ 8:30ರವರೆಗೆ) ದ.ಕ. ಜಿಲ್ಲೆಯ ಸುಳ್ಯದ ಮಂಡೆಕೋಲಿನಲ್ಲಿ 211.5 ಮಿ.ಮೀ. ಮಳೆ ಸುರಿದಿದ್ದು, ಇದು ಈ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿದ ಪ್ರದೇಶವಾಗಿದೆ.

ಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿಗಾ ಕೇಂದ್ರದ ಪ್ರಕಾರ, ಸುಳ್ಯದ ಜಾಲ್ಸೂರಿನಲ್ಲಿ 175.5 ಮಿ.ಮೀ. ಮಳೆ ದಾಖಲಾಗಿದ್ದರೆ, ಬಂಟ್ವಾಳದ ಸರಪಾಡಿಯಲ್ಲಿ 166 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ಕೊಡಗಿನ ಮಡಿಕೇರಿಯ ಮಡೆ ಎಂಬಲ್ಲಿ ಅತ್ಯಧಿಕ ಮಳೆ ದಾಖಲಾಗಿದ್ದು (150 ಮಿ.ಮೀ.), ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗೋಟೆಗಲಿಯಲ್ಲಿ 145.5 ಮಿ.ಮೀ., ಉಡುಪಿಯ ಕೋಡಿಬೆಟ್ಟುವಿನಲ್ಲಿ 140.5 ಮಿ.ಮೀ.ನೊಂದಿಗೆ ಅತ್ಯಧಿಕ ಮಳೆ ದಾಖಲಾಗಿದೆ.

ರಾಜ್ಯದ ಕರಾವಳಿ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದರೂ ಮುಂಗಾರುವಿನಲ್ಲಿ ಸಹಜವಾಗಿ ಸುರಿಯಬೇಕಾಗಿದ್ದ ಮಳೆ ಇನ್ನೂ ಸುರಿದಿಲ್ಲ. ರಾಜ್ಯದಲ್ಲಿ ಜೂನ್ 1ರಿಂದ ಜುಲೈ 6ರವರೆಗೆ ಒಟ್ಟು 249 ಮಿ.ಮೀ. ಮಳೆಯಾಗಬೇಕಿದೆ. ಸುರಿದಿರುವುದು 152 ಮಿ.ಮೀ., ಇದರಿಂದ ಶೇ.39ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಮುಂದುವರಿದಿದೆ. ಕರಾವಳಿಯಲ್ಲಿ 1,055 ಮಿ.ಮೀ. ಮಳೆಯಾಗಬೇಕಾದಲ್ಲಿ ಸುರಿದಿರುವುದು 714 ಮಿ.ಮೀ. ಆಗಿರುವುದರಿಂದ ಶೇ.32ರಷ್ಟು ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ 488 ಮಿ.ಮೀ. ಬದಲಿಗೆ ಆಗಿರುವುದು 185 ಮಿ.ಮೀ ಮಳೆ. ಈ ಮೂಲಕ ಶೇ. 62ರಷ್ಟು ಮಳೆ ಕೊರತೆಯಾಗಿದೆ.

ದ.ಕ. ಜಿಲ್ಲಾದ್ಯಂತ ಗುರುವಾರ ತಡರಾತ್ರಿಯವರೆಗೂ ಮಳೆಯಬ್ಬರ ಮುಂದುವರಿದಿತ್ತಾದರೂ, ಇಂದು ಮುಂಜಾನೆಯಿಂದ ಮಳೆ ತಗ್ಗಿದ್ದು, ಸ್ವಲ್ಪ ಬಿಸಿಲಿನ ವಾತಾವರಣ ಕಾಣಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!