ಬಂಟ್ವಾಳ ಪುರಸಭಾ ಅಧ್ಯಕ್ಷರಾಗಿ ವಾಸು ಪೂಜಾರಿ, ಉಪಾಧ್ಯಕ್ಷರಾಗಿ ಮೂನಿಶ್ ಆಲಿ ಆಯ್ಕೆ
ಬಂಟ್ವಾಳ ಪುರಸಭಾ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಾಸು ಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐನ ಮುನೀಶ್ ಆಲಿ ಆಯ್ಕೆಯಾಗಿದ್ದಾರೆ.
ಪುರಸಭಾ ಒಟ್ಟು 27 ಸ್ಥಾನಗಳ ಪೈಕಿ ಒಂದು ಸ್ಥಾನ ತೆರವಾಗಿದ್ದು, ಬಿಜೆಪಿ 11 ಸ್ಥಾನ, ಬಿಜೆಪಿ 11 ಸ್ಥಾನ ಹಾಗೂ ಎಸ್ ಡಿಪಿಐ 4 ಸ್ಥಾನ ಹೊಂದಿತ್ತು. ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿ ಸ್ಥಾನ 13ಕ್ಕೆ ಏರಿತ್ತು.
ಕಾಂಗ್ರೆಸ್ ನ ವಾಸು ಪೂಜಾರಿ ಅವರಿಗೆ ಎಸ್ ಡಿಪಿಐ ಬೆಂಬಲಿಸಿದ್ದು, ಉಪಾಧ್ಯಕ್ಷ ಸ್ಥಾನದ ಎಸ್ ಡಿಪಿಐನ ಮುನೀಶ್ ಆಲಿಗೆ ಕಾಂಗ್ರೆಸ್ ಬೆಂಬಲ ನೀಡಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯರಾದ ಎ.ಗೋವಿಂದ ಪ್ರಭು, ಕಾಂಗ್ರೆಸ್ ನಿಂದ ವಾಸು ಪೂಜಾರಿ ಲೊರೆಟ್ಟೊ ಹಾಗೂ ಎಸ್.ಡಿ.ಪಿ.ಐ ಪಕ್ಷದ ಮಹಮ್ಮದ್ ಇದ್ರೀಶ್ ಪಿ.ಜೆ ನಾಮಪತ್ರ ಸಲ್ಲಿಸಿದ್ದರು. ಕೊನೇ ಕ್ಷಣದಲ್ಲಿ ಇದ್ರೀಶ್ ನಾಮಪತ್ರ ವಾಪಾಸ್ ಪಡೆದಿದ್ದರು. ಅಧ್ಯಕ್ಷ ಚುನಾವಣೆಯಲ್ಲಿ ಎಸ್‌ಡಿಪಿಐ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹರಿಪ್ರಸಾದ್ ಹಾಗೂ ಎಸ್‌ಡಿಪಿಐ ಪಕ್ಷದ ಮೂನಿಶ್ ಆಲಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಎಸ್‌ಡಿಪಿಐ ಅಭ್ಯರ್ಥಿಗೆ ಬೆಂಬಲಿಸಿದೆ ಎಂದು ತಿಳಿದು ಬಂದಿದೆ.
ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 15 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 13 ಮತಗಳನ್ನು ಪಡೆದರು. ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್ ಡಿ ಪಿಐ ಅಭ್ಯರ್ಥಿ 15 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 13 ಮತಗಳನ್ನು ಪಡೆದು ಸೋಲನುಭವಿಸಿದರು.