ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ‘ಸಿಸಿಯು’ ವಿನೂತನ ಘಟಕ ಕಾರ್ಯಾರಂಭ
ಪುತ್ತೂರು: ಗುಣಮಟ್ಟದ ಶಿಕ್ಷಣ ನೀಡುವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಕುಂಬ್ರ ಮರ್ಕಝು ಲ್ ಹುದಾ ಮಹಿಳಾ ಕಾಲೇಜು ವಿನೂತನ ಯೋಜನೆಗಳಿಗೆ ಚಾಲನೆ ನೀಡುತ್ತಲೇ ಇದೆ. ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ‘ಸ್ಟಡೀ ಐಸಿಯು’ ಎಂಬ ವಿಭಿನ್ನ ಘಟಕವನ್ನು ಪ್ರಾರಂಭಿಸಿ ಉತ್ತಮ ಬದಲಾವಣೆಯ ಫಲಿತಾಂಶ ಕಂಡ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದೀಗ ಕಾಲಾಪೇಕ್ಷಿತ ಮೌಲ್ಯಭರಿತವಾದ ಸಿ.ಸಿ.ಯು(ಸ್ಟೂಡೆಂಟ್ ಕಾಂಪ್ರಹನ್ಸಿವ್ ಕೇರ್ ಯುನಿಟ್) ಎಂಬ ಇನ್ನೊಂದು ವಿನೂತನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ.
ಮೊಬೈಲ್ ದುರುಪಯೋಗದಿಂದುಂಟಾಗುವ ದುರಂತಗಳು, ಮತ್ತು ಇನ್ನಿತರ ಅನಗತ್ಯ ವಿಚಾರಗಳಿಗೆ ವಿದ್ಯಾರ್ಥಿನಿಯರು ಬಲಿಯಾಗದೇ ಒಳಿತಿನ ಕ್ಷೇತ್ರದಲ್ಲಿ ಮಾತ್ರ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಯುನಿಟ್ ಸಕ್ರೀಯ ಕಾರ್ಯಾಚರಣೆ ನಡೆಸಲಿದೆ.
ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಯೂ ಈ ಯುನಿಟ್‌ನ ಮುಖ್ಯ ಉದ್ದೇಶವಾಗಿದ್ದು ಪೋಷಕರಿಗೆ ವಿದ್ಯಾರ್ಥಿನಿಯರ ನಡತೆಗಳಲ್ಲಿ ನ್ಯೂನ್ಯತೆಗಳು ಕಂಡು ಬಂದಲ್ಲಿ ಪೋಷಕರು ನೇರವಾಗಿ ಪ್ರಾಂಶುಪಾಲರುಗಳಿಗೆ ಅಥವಾ ವ್ಯವಸ್ಥಾಪಕರಿಗೆ ಮುಖತ: ಅಥವಾ ಶರೀಅತ್ ವಿಭಾಗ(೯೪೮೧೨೭೩೬೫೨), ಪದವಿ ವಿಭಾಗ(೯೯೬೪೫೮೪೯೭೧), ಪದವಿಪೂರ್ವ ವಿಭಾಗ( ೯೯೦೧೩೨೨೭೫೯), ವ್ಯವಸ್ಥಾಪಕರು (೮೬೧೮೩೬೧೧೭೪) ಇವರಿಗೆ ತಿಳಿಸಬಹುದಾಗಿದೆ.
ಸಿಸಿಯು ನೂತನ ಯೋಜನೆಯನ್ನು ಸಂಸ್ಥೆಯ ಕೋಶಾಧಿಕಾರಿ ಕೆ.ಬಿ.ಕಾಸಿಂ ಹಾಜಿ ಮಿತ್ತೂರುರವರು ಉದ್ಘಾಟಿಸಿದರು. ಶರೀಅತ್ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ಪ್ರಾರ್ಥಿಸಿ ಹಿತವಚನ ನೀಡಿದರು. ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಸಂದ್ಯಾ ಪಿ, ನೂತನ ಘಟಕಕ್ಕೆ ಶುಭ ಕೋರಿದರು. ಪದವಿಪೂರ್ವ ವಿಭಾಗದ ಉಪನ್ಯಾಸಕಿ ಪ್ರತಿಭಾ ರೈ ವಂದಿಸಿದರು.
ಯೋಜನೆ ಯಶಸ್ವಿಯಾಗಲಿದೆ: ಮರ್ಕಝ್ ಕ್ಯಾಂಪಸ್ ನವೀನ ತಂತ್ರಗಾರಿಕೆಯನ್ನು ಅಳವಡಿಸಿ ಸಿಸಿಯು ಪದ್ದತಿಗೆ ರೂಪು ನೀಡಲಾಗಿದೆ. ಮೊಬೈಲ್ ದುರ್ಬಳಕೆಗೆ ವಿದ್ಯಾರ್ಥಿನಿಯರು ಬಲಿಯಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ನಮ್ಮ ಸಂಸ್ಥೆ ಉತ್ತಮ ಯೋಜನೆಯೊಂದನ್ನು ಅನುಷ್ಠಾನಕ್ಕೆ ತಂದಿದ್ದು ಇದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ತಿಳಿಸಿದ್ದಾರೆ.