ಕರಾವಳಿರಾಜ್ಯ

ಸುಹಾಸ್‌ ಶೆಟ್ಟಿ ಮೇಲೆ ರೌಡಿಶೀಟರ್ ತೆರೆದದ್ದು ಬಿಜೆಪಿ ಸರಕಾರದ ಅವಧಿಯಲ್ಲಿ

ಮಂಗಳೂರು: ಸುಹಾಸ್‌ ಶೆಟ್ಟಿ ಮೇಲೆ ರೌಡಿಶೀಟರ್ ಓಪನ್ ಮಾಡಿದ್ದೇ ಬಿಜೆಪಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ. ಇದು ಇತ್ತೀಚೆಗೆ ಹತ್ಯೆಯಾದ ಸುಹಾಶ್ ಶೆಟ್ಟಿ ವಿರುದ್ದ ರೌಡಿ ಶೀಟರ್ ತೆರೆಯಲು ಪೊಲೀಸ್ ಇಲಾಖೆ ನೀಡಿದ್ದ ಆದೇಶದ ಪ್ರತಿ.
ಸುಹಾಸ್ ಶೆಟ್ಟಿ ವಿರುದ್ಧ ರೌಡಿಶೀಟರ್ ಓಪನ್ ಆಗಿದ್ದು 2020ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ. ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ. ಇಂದು ಸುಹಾಸ್‌ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ಸುಹಾಸ್‌ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು? ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಇವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್‌ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್‌ಗಳನ್ನು ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ. ಸುಹಾಸ್ ಹತ್ಯೆ ನಂತರ ಕೂಗುಮಾರಿಗಳಂತೆ ಅರಚುತ್ತಿರುವ ಬಿಜೆಪಿ ನಾಯಕರ ಯಾರ ಮಕ್ಕಳಾದರೂ ಧರ್ಮದ ಅಮಲಿನಲ್ಲಿ ಬೀದಿ ಕಾಳಗ ಮಾಡುತ್ತಿದ್ದಾರೆಯೆ? ಅಥವಾ ಧರ್ಮಕ್ಕಾಗಿ ಬಡಿದಾಡುತ್ತಿದ್ದಾರೆಯೆ? ಬಿಜೆಪಿ ನಾಯಕರ ಧರ್ಮಾಂಧತೆಗೆ ಬೀದಿ ಹೆಣವಾಗುತ್ತಿರುವುದು ಬಡವರ ಮಕ್ಕಳು. ಇದು ಸತ್ಯವಲ್ಲವೆ? ಬಿಜೆಪಿಯವರ ಕೆಟ್ಟ ರಾಜಕೀಯಕ್ಕೆ ಕರಾವಳಿಯಲ್ಲಿ ಎಷ್ಟೋ ಜನರ ಬಲಿಯಾಗಿದೆ. ಎಷ್ಟೋ ಮನೆಗಳ ದೀಪ ಆರಿ ಹೋಗಿದೆ. ಇಷ್ಟಾದರೂ ಇವರ ರಕ್ತದಾಹ ನಿಂತಿಲ್ಲ. ಕರಾವಳಿಯಲ್ಲಿ ಇನ್ನಷ್ಟು ಹೆಣ ಬೀಳಬೇಕು ಎನ್ನುವ ಉದ್ದೇಶದಿಂದ ದುಷ್ಟ ರಾಜಕಾರಣ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಜನ ಪ್ರಜ್ಞಾವಂತಿಕೆಯ ಜೊತೆಗೆ ಸೂಕ್ಷ್ಮತೆಯನ್ನು ಅರಿತುಕೊಂಡವರು. ಇನ್ನಾದರೂ ಕರಾವಳಿಯ ಜನ ಬಿಜೆಪಿಯ ಹುನ್ನಾರ ಅರಿಯಬೇಕಿದೆ. ಇಲ್ಲದಿದ್ದರೆ ಬಿಜೆಪಿಯವರ ಕೆಟ್ಟ ರಾಜಕಾರಣಕ್ಕೆ ಜಿಲ್ಲೆಯ ನೆಮ್ಮದಿಯೇ ಹಾಳಾಗಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!