ಕರಾವಳಿಕ್ರೈಂ

ಉಪ್ಪಿನಂಗಡಿ: ಕಿಡ್ನಾಪ್ ಪ್ರಕರಣ -ಐವರು ಅರೆಸ್ಟ್



ಉಪ್ಪಿನಂಗಡಿ ಸಮೀಪದ ಕೊಯಿಲದ ಯುವಕನೊಬ್ಬನನ್ನು ಹಣಕ್ಕಾಗಿ ಅಪಹರಿಸಿದ ಮತ್ತು ಅರ್ಕುಳದ ತುಪ್ಪೆಕಲ್ಲು ಎಂಬಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ತುಪ್ಪೆಕಲ್ಲು ಎಂಬಲ್ಲಿ ಅನುಮಾನಾಸ್ಪದವಾಗಿ ಕಾರೊಂದರ ಬಳಿ ನಿಂತಿದ್ದ ಐವರನ್ನು ಪ್ರಶ್ನಿಸಿದ್ದರು. ಈ ವೇಳೆ ಐವರು ಪೊಲೀಸರತ್ತ ಕಲ್ಲು ತೂರಾಟ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದರು ಎನ್ನಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಕೊಂಡು ಕಾರ್ಯಾಚರಣೆ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಬೆಂಗಳೂರಿನ ರೌಡಿ ಶೀಟರ್ ಸೂಚನೆಯಂತೆ ಉಪ್ಪಿನಂಗಡಿಯ ಕೊಯಿಲ ನಿವಾಸಿ ಶಾರೂಕ್‌ ಎಂಬಾತನನ್ನು ಅಪಹರಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿ ಹಣಕ್ಕಾಗಿ ಗೃಹ ಬಂಧನದಲ್ಲಿರಿಸಿದ್ದ ಶಾರೂಕ್‌ ನನ್ನು ರಕ್ಷಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಐವರು ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ರೌಡಿ ಶೀಟರ್ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಉಪ್ಪಿನಂಗಡಿಯ ಅಬೂಬಕರ್ ಸಿದ್ದೀಕ್ ಯಾನೆ ಕರ್ವೆಲ್ ಸಿದ್ದಿಕ್, ಖಲಂದರ್ ಶಾಫಿ ಗಡಿಯಾರ, ದೇರಳಕಟ್ಟೆಯ ಇರ್ಫಾನ್, ಪಾಂಡೇಶ್ವರದ ಮುಹಮ್ಮದ್ ರಿಯಾಝ್, ಮತ್ತು ಬೆಳ್ತಂಗಡಿಯ ಮುಹಮ್ಮದ್ ಇರ್ಷಾದ್ ಬಂಧಿತ ಆರೋಪಿಗಳು.

Leave a Reply

Your email address will not be published. Required fields are marked *

error: Content is protected !!