ವಂಚಕ ಟ್ರಾವೆಲ್ ಏಜೆನ್ಸಿಗಳ ಬಗ್ಗೆ ಜನತೆ ಜಾಗೃತರಾಗಬೇಕು- ಅಝೀಝ್ ಪವಿತ್ರ ಮನವಿ
ಉಮ್ರಾ ಮತ್ತು ಹಜ್ ಯಾತ್ರೆ ಕೈಗೊಳ್ಳುವವರು ವಂಚಕ ಟ್ರಾವೆಲ್ ಏಜೆನ್ಸಿಗಳ ಬಗ್ಗೆ ಜಾಗೃತರಾಗುವಂತೆ ಅನಿವಾಸಿ ಭಾರತೀಯ ಕಲ್ಯಾಣ ಸಮಿತಿ ಸಂಚಾಲಕ ಅಬ್ದುಲ್ ಅಝೀಝ್ ಪವಿತ್ರ ಮನವಿ ಮಾಡಿದ್ದಾರೆ.
ಮುಹಮ್ಮದಿಯಾ ಉಮ್ರಾ & ಹಜ್ ಟ್ರಾವೆಲ್ಸ್ ಮೂಲಕ ಉಮ್ರಾ ಯಾತ್ರೆಗೆ ತೆರಳಿ ಬಳಿಕ ಮೋಸ ಹೋದ ಸುಮಾರು 160 ಯಾತ್ರಾರ್ಥಿಗಳ ಸಂಕಷ್ಟ ಕಂಡು ಅವರಿಗೆ ವಿವಿಧ ರೀತಿಯ ನೆರವು ಮತ್ತು ಧೈರ್ಯ ತುಂಬಿದ ಅಬ್ದುಲ್ ಅಝೀಝ್ ಪವಿತ್ರ ಮಾತನಾಡಿ ಜನರಿಗೆ ಕಡಿಮೆ ದರದಲ್ಲಿ ಉಮ್ರಾ ಮಾಡುವ ಅವಕಾಶ ತೋರಿಸಿ ಬಳಿಕ ಅವರನ್ನು ಅರ್ಧ ದಾರಿಯಲ್ಲಿ ಬಿಡುವುದೆಂದರೆ ಅದನ್ನು ನಂಬಲು ಸಾಧ್ಯವಿಲ್ಲ, ವೃದ್ಧರು, ಮಹಿಳೆಯರು, ಮಕ್ಕಳು, ರೋಗಿಗಳು ತೀವ್ರ ಸಂಕಷ್ಟ ಅನುಭವಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ, ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ಅವರು ಹೇಳಿದ್ದಾರೆ.
ವಂಚಕ ಏಜೆನ್ಸಿ ವಿರುದ್ದ ಈಗಾಗಲೇ ನಾನು ಸಂಬಂಧಪಟ್ಟವರ ಜೊತೆ ಮಾತನಾಡಿದ್ದು ಇತರ ಸಂಘ ಸಂಸ್ಥೆಯವರು ಕೂಡಾ ಕ್ರಮಕ್ಕೆ ಆಗ್ರಹಿಸಿ ಮನವಿ ಮಾಡಿದ್ದಾರೆ. ಸರಕಾರ ಮದ್ಯ ಪ್ರವೇಶಿಸಿ ವಿಶ್ವಾಸಾರ್ಹತೆ ಕೊರತೆಯಿರುವ ಏಜೆನ್ಸಿಗಳ ವಿರುದ್ದ ನಿಯಮ ರೂಪಿಸಬೇಕು, ಬೇಕಾಬಿಟ್ಟಿಯಾಗಿ ಉಮ್ರಾ ಹಜ್ ಯಾತ್ರೆ ಏರ್ಪಡಿಸುವ ಏಜೆನ್ಸಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜನತೆ ಜಾಗೃತರಾಗುವ ಮೂಲಕ ವಂಚಕ ಏಜೆನ್ಸಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಉಮ್ರಾ ಹಜ್ ಯಾತ್ರೆ ಹಮ್ಮಿಕೊಳ್ಳುವ ಟ್ರಾವೆಲ್ ಏಜೆನ್ಸಿಗಳಿಗೆ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.