ಕರಾವಳಿರಾಜ್ಯ

ಎಲ್ಲಿದ್ದೀಯಾ ಗುಲಾಬಿ ಬಣ್ಣದ ಚೆಲುವೆ: ನಿನ್ನ ದೊಡ್ಡಸ್ತಿಕೆಯೇ ನಿನಗೆ ಮುಳುವಾಯಿತಲ್ಲಾ



ಎಲ್ಲಿದ್ದೀಯಾ ಗುಲಾಬಿ ಬಣ್ಣದ ಚೆಲುವೆಯೇ? 2016 ನವಂಬರ್ ನಲ್ಲಿ ಮೊದಲ ಬಾರಿಗೆ ನಿನ್ನ ಕಂಡಾಗ ಮೋಹ ಮರುಳಾದವರು ಕಣೇ ನಾವು. ಅಂದ ಚೆಂದದ ಜೊತೆ ನಿನ್ನ ಧಿಮಾಕು ಬೇರೆ. ಆಗಷ್ಟೇ ಖಾಲಿ ಖಾಲಿಯಾಗಿ ಕಾಯುತ್ತಿದ್ದ ನಮ್ಮ ಕೈ ಸೇರಿದ ಚಿನ್ನಾರಿ ನೀನು. ಆಹಾ ಅಗೆಲ್ಲಾ ನಿನಗೆ ಎಂಥಾ ದೌಲತ್ತು. ಅಂದದಲ್ಲಿ, ಚೆಂದದಲ್ಲಿ, ಆಕಾರದಲ್ಲಿ,ಮೌಲ್ಯದಲ್ಲಿ ನೀನೇ ಮೊದಲಿಗಳು ನೋಡು. ಅದು ಅದು ನಿನಗೆ ಕೊಬ್ಬು.
ಅಬ್ಬಬ್ಬಾ ನೀನೊಬ್ಬಳು ಜೊತೆಗಿದ್ದರೆ ಇಡೀ ಊರೇ ಗೆದ್ದು ಬಂದ ಹಮ್ಮು ನಮ್ಮದು.
ನೀನಿದ್ದರೆ ಹಗುರ. ನಮ್ಮ ಬೆಲೆ ಅಪಾರ.

ಗೋಪಾಲಕೃಷ್ಣ ಕುಂಟಿನಿ

ಅಂಥಾ ಸುರಸುಂದರಿ ನೀನು ಈಗ ಎಲ್ಲೂ ನೋಡೋಕೂ ಸಿಗುತ್ತಿಲ್ಲವಲ್ಲಾ. ಬ್ಯಾಂಕಲ್ಲಿ ಕೇಳಿದರೆ ನೀನಿಲ್ಲ. ಎಟಿಎಂ ಒತ್ತಿದರೆ ಬರಲ್ಲ,ಅಂಗಡಿ ಮಳಿಗೆಗಳಲ್ಲಿ ಕಾಣಿಸ್ತಿಲ್ಲ.

ಅರೆರೆ, ಎಲ್ಲ್ಹೋದೆ ಚಿನ್ನಾ? ಯಾರು ಮಡಗಿಕೊಂಡಿದ್ದಾರೆ ನಿನ್ನ?
ನಿನ್ನ ದೊಡ್ಡಸ್ತಿಕೆಯೇ ನಿನಗೆ ಮುಳುವಾಯಿತಲ್ಲಾ. ನಮಗೆ ಗೊತ್ತು,ಅಕ್ರಮವಾಗಿ ನಿನ್ನನ್ನು ಯಾರೋ ಕೂಡಿ ಹಾಕಿದ್ದಾರೆ ಖಂಡಿತ. ರಾಜಕಾರಣಿಗಳು, ಭ್ರಷ್ಠ ಅಧಿಕಾರಿಗಳು,ದುಷ್ಟ ಶ್ರೀಮಂತರ ಕೋಠಿಗಳಲ್ಲಿ ನೀನು ಬಂಧಿಯಾಗಿರುವೆ ಪಕ್ಕಾ. ಅದಕ್ಕೆ ನೀನು ನಮ್ಮಂಥವರಿಗೆ ಸಿಗುತ್ತಿಲ್ಲ. ನೀನು ಎಲ್ಲೇ ಇರು, ಒಟ್ಚಾರೆ ಸುಖವಾಗಿರು.
ಇನ್ನು ಏನಿದ್ದರೂ ಎಲೆಕ್ಷನ್ ಸಮಯದಲ್ಲಿ ನೀನು ಹೊರಗೆ ಬಂದೇ ಬರುತ್ತೀಯಾ, ಎಲ್ಲೆಲ್ಲೂ ಓಡಾಡುತ್ತೀಯಾ ಅಂತಾನೂ ಗೊತ್ತು, ಆಗ ನಿನ್ನ ಭೇಟಿಯಾಗ್ತೀವಿ.
ಇಂತು,
ನಿನ್ನ ಪ್ರೀತಿಯ ……

ಹೀಗೆ 2000 ರೂ. ನೋಟಿನ ಪ್ರಸ್ತುತ ಅಲಭ್ಯತೆ ಬಗ್ಗೆ ಫೇಸ್ ಬುಕ್ ನಲ್ಲಿ ಹಿರಿಯ ಪತ್ರಕರ್ತರಾಗಿರುವ ಗೋಪಾಲಕೃಷ್ಣ ಕುಂಟಿನಿಯವರು ಬರೆದುಕೊಂಡಿದ್ದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!