ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ
ಹಿಂದೂಪರ ಸಂಘಟನೆಗಳಿಂದ ತಿಂಗಳಾಡಿಯಲ್ಲಿ ಜಾಥಾ, ರಸ್ತೆ ತಡೆ, ಪ್ರತಿಭಟನೆ
ಪುತ್ತೂರು: ಹಿಂದೂ ಸಮಾಜದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು ಮುಂದಕ್ಕೆ ಇದೇ ರೀತಿ ಮುಂದುವರಿದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ, ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು
ಬಜರಂಗದಳದ ಮುಖಂಡ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಸೆ.14 ರ ಸಂಜೆ ತಿಂಗಳಾಡಿಯ ಅಂಗಡಿಯೊಂದರಲ್ಲಿ ಹಿಂದೂ ಮಹಿಳೆಯೊಬ್ಬರಿಗೆ ಮುಸ್ಲಿಂ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಖಂಡಿಸಿ ಸೆ.15ರಂದು ಬೆಳಗ್ಗೆ ತಿಂಗಳಾಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ದಿನಸಿ ಸಾಮಾಗ್ರಿ ಖರೀದಿ ಮಾಡಲು ಅಂಗಡಿಗೆ ಬಂದ ಹಿಂದೂ ಸಹೋದರಿ ಮೇಲೆ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಮುಂಜಾನೆಯೊಳಗೆ ಬಂಧಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದೆವು ಆದರೆ ಪೊಲೀಸ್ ಅಧಿಕಾರಿಗಳು ಕೇವಲ 4 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಈ ಘಟನೆಯ ವಿರುದ್ಧದ ಆಕ್ರೋಶ ತಿಂಗಳಾಡಿಗೆ ಸೀಮಿತವಾಗಬಾರದು. ಇಡೀ ದೇಶದಲ್ಲಿ ಇಂಥ ಕೃತ್ಯದ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು. ಬಂಧಿತ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆತ ರಾಜಾರೋಷವಾಗಿ ಸಮಾಜದಲ್ಲಿ ತಿರುಗಾಡಲು ಬಿಡಬಾರದು ಎಂದರು.
ಹಿಂದೂ ಜಾಗರಣ ವೇದಿಕೆ ಮುಖಂಡ ಚಿನ್ಮಯ್ ಈಶ್ವರಮಂಗಲ ದೇಶದ ನಾನಾ ಕಡೆ ಇಂಥ ಘಟನೆ ನಡೆದಿದೆ. ಇನ್ನು ಮುಂದಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಕುಮಾರ್ ಇದ್ಯಪೆ, ಬಿಜೆಪಿ ಪಕ್ಷದ ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ನಾರಾಯಣ ಪೂಜಾರಿ ಕುರಿಕ್ಕಾರ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಕರುಣಾಕರ ಗೌಡ, ಸೀತಾರಾಮ ರೈ ಕೆದಂಬಾಡಿ ಗುತ್ತು, ರತ್ನಾಕರ ರೈ ಕೆದಂಬಾಡಿಗುತ್ತು, ಭಾಸ್ಕರ ಬಳ್ಳಾಳ್ ಬೀಡು, ಜಯರಾಮ್ ರೈ ಮಿತ್ರಂಪಾಡಿ, ಮನೋಹರ ರೈ, ಸೂರ್ಯಪ್ರಸನ್ನ ರೈ, ಜಗನ್ನಾಥ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಖಂಡನಾ ಸಭೆಗೆ ಮುನ್ನ ಪ್ರತಿಭಟನಾಕಾರರು ತಿಂಗಳಾಡಿ ಪೇಟೆಯಲ್ಲಿ ಜಾಥಾ ನಡೆಸಿದರು. ಪ್ರತಿಭಟನೆ ಸಂದರ್ಭ ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದರು. ಸುಮಾರು ಅರ್ಧ ಗಂಟೆ ಹೊತ್ತು ಜಿಲ್ಲಾ ಮುಖ್ಯರಸ್ತೆಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.