ಪುತ್ತೂರು: ನ್ಯಾಯಾಧೀಶರ ಮುಂದೆಯೇ ಯುವಕ ಆತ್ಮಹತ್ಯೆಗೆ ಯತ್ನ, ಮಂಗಳೂರಿನ ಆಸ್ಪತ್ರೆಗೆ ದಾಖಲು
ಪುತ್ತೂರು: ನ್ಯಾಯಾಧೀಶರ ಮುಂದೆಯೇ ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಜ.22ರಂದು ನಡೆದಿದೆ.
ಕಾವು ಮೂಲದ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರವಿ ಹಾಗೂ ಅವರ ಪತ್ನಿ ಮಧ್ಯೆ ಕೆಲ ದಿನಗಳಿಂದ ವೈಮನಸ್ಸು ತಲೆದೋರಿತ್ತು. ಇವರ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿತ್ತು.
ತನ್ನ ವಿರುದ್ಧ ಪತ್ನಿ ದೂರು ನೀಡುವ ವಿಚಾರದ ಬಗ್ಗೆ ಮಾಹಿತಿ ತಿಳಿದ ರವಿ ಅವರು ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, 5ನೇ ಹೆಚ್ಚುವರಿ ನ್ಯಾಯಾಲಯದ ಜಡ್ಜ್ ಎದುರಲ್ಲೇ ವಿಷ ಸೇವಿಸಿದ್ದಾರೆನ್ನಲಾಗಿದೆ.
ವಿಷ ಸೇವಿಸಿದ ಬಳಿಕ ನ್ಯಾಯಾಲಯದ ಆವರಣದಲ್ಲೇ ರವಿ ವಾಂತಿ ಮಾಡಿಕೊಂಡಿದ್ದು, ತಕ್ಷಣ ಅಲ್ಲಿನ ಸಿಬ್ಬಂದಿ, ಸಾರ್ವಜನಿಕರು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಗೇರುತೋಟಕ್ಕೆ ಸಿಂಪಡಿಸುವ ಕೀಟನಾಶಕವನ್ನು ರವಿ ಸೇವಿಸಿದ್ದಾರೆ ಎನ್ನಲಾಗಿದ್ದು ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.





