ಬಂಟ್ವಾಳ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ಎಂ.ಡಿ.ಎಂ.ಎ, ಗಾಂಜಾ ಸಹಿತ ₹4.90 ಲಕ್ಷ ಮೌಲ್ಯದ ಸ್ವತ್ತು ವಶ
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಎಂಬಲ್ಲಿ ಪೊಲೀಸರು ದಾಳಿ ನಡೆಸಿ ನಿಷೇಧಿತ ಎಂ.ಡಿ.ಎಂ.ಎ ಹಾಗೂ ಗಾಂಜಾ ಸೇರಿದಂತೆ ಒಟ್ಟು ₹4.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆ.08ರಂದು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ, ಐಪಿಎಸ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ದಾಳಿಯಲ್ಲಿ ಸುಮಾರು ₹2.25 ಲಕ್ಷ ಮೌಲ್ಯದ 22.57 ಗ್ರಾಂ ಎಂ.ಡಿ.ಎಂ.ಎ, 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ 5 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಶೀರ್ ಹುಸೇನ್ (37), ಅಡ್ಯಾರ್, ಮಂಗಳೂರು; ಮಹಮ್ಮದ್ ಜುನೈದ್ (38), ಗೋಳ್ತಮಜಲು, ಬಂಟ್ವಾಳ; ಹಾಗೂ ಮೊಹಮ್ಮದ್ ಅಫ್ರೀದಿ (24), ಕಂಕನಾಡಿ, ಮಂಗಳೂರು ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 112/2026, ಎನ್ಡಿಪಿಎಸ್ ಕಾಯ್ದೆ 1985ರ ಕಲಂ 8(C) ಜೊತೆಗೆ 22(C) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಪಿಎಸ್ಐ ರನ್ನ ಗೌಡ ಎಸ್. ಪಾಟೀಲ್, ಪ್ರೊ. ಪಿಎಸ್ಐಗಳಾದ ಶಿವರಾಮ್ ಮತ್ತು ಫಕೀರಪ್ಪ ಹಾಗೂ ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ ಕೆ., ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ವಿವೇಕ್ ರೈ, ಕುಮಾರ್, ಬಸವರಾಜ್, ಶ್ರೀಧರ್ ಮತ್ತು ಧನ್ಯಶ್ರೀ ಭಾಗವಹಿಸಿದ್ದರು. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಹಾಗೂ ಸಂಪತ್ ಅವರು ಸಹಕರಿಸಿದರು.


