ಕರಾವಳಿ

ಕುಂಬ್ರ ವರ್ತಕರ ಸಂಘದಿಂದ ಎಂಡೋ ಸಲ್ಪಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ದಿನಸಿ ಸಾಮಾಗ್ರಿಗಳ ಕೊಡುಗೆ

ಪುತ್ತೂರು: ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕುಂಬ್ರ ವರ್ತಕರ ಸಂಘವು ಮಾನವೀಯ ಕಾರ್ಯದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದು ಎಂಡೋ ಸಲ್ಪಾನ್ ಸಂತ್ರಸ್ತರ ಪಾಲನಾ ಕೇಂದ್ರವೊಂದಕ್ಕೆ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ.

ಕರ್ನಾಟಕ ಸರಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಉದ್ಭವ್ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಕೇಂದ್ರ ಬೆಂಗಳೂರು ಇವರು ನಡೆಸುವ ಎಂಡೋ ಸಲ್ಪಾನ್ ಸಂತ್ರಸ್ತರ ಪಾಲನಾ ಕೇಂದ್ರ ಬೆಳ್ಳಾರೆ ಇದಕ್ಕೆ ಕುಂಬ್ರ ವರ್ತಕರ ಸಂಘದಿಂದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದಿನಸಿ ಸಾಮಾಗ್ರಿಗಳನ್ನು ಕೊಡುಗೆಯಾಗಿ ವಿತರಿಸಲಾಯಿತು. ಪಾಲನಾ ಕೇಂದ್ರದ ಮ್ಯಾನೇಜರ್ ಶರ್ಮಿಳಾ ಎನ್‌ರವರು ದಿನಸಿ ಸಾಮಾಗ್ರಿಗಳನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ, ಎಂಡೋ ಪೀಡಿತ ಮಕ್ಕಳೆಂದರೆ ಅವರುಗಳು ದೇವರ ಮಕ್ಕಳಂತೆ, ಇಂತಹ ಮಕ್ಕಳ ಲಾಲನೆ ಪಾಲನೆ ಮಾಡುವುದು ಎಂದರೆ ಅದು ಕೂಡ ದೇವರ ಕೆಲಸವೇ ಆಗಿದೆ. ಇಂತಹ ದೇವರ ಕೆಲಸವನ್ನು ಈ ಡೇಕೇರ್ ಸಂಸ್ಥೆ ಮಾಡುತ್ತಾ ಬರುತ್ತಿದ್ದು ಇಂತಹ ಸಂಸ್ಥೆಗೆ ನಮ್ಮ ವರ್ತಕರ ಸಂಘದಿಂದ ಪುಟ್ಟ ಸಹಾಯವನ್ನು ಮಾಡಿದ್ದೇವೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ಮಾತನಾಡಿ, 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಂಡೋ ಪೀಡಿತ ವಿಶೇಷ ಚೇತನ ಮಕ್ಕಳ ಬದುಕಲ್ಲಿ ಪುಟ್ಟದಾದ ನಗು ಮೂಡಿಸುವ ಕೆಲಸವನ್ನು ಮಾಡಿದ್ದೇವೆ. ಇಂತಹ ಒಂದು ಸಂಸ್ಥೆಗೆ ದಿನಸಿ ಸಾಮಾಗ್ರಿಗಳನ್ನು ನೀಡಿರುವುದು ನಮಗೆ ಬಹಳಷ್ಟು ಖುಷಿ ತಂದಿದೆ. ಇದು ದೇವರು ಮೆಚ್ಚುವ ಕೆಲಸ. ನಮ್ಮ ಸಂಘದ ವರ್ತಕ ಬಂಧುಗಳು ಇದಕ್ಕೆ ಸಹಕಾರ ನೀಡಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಭವ್ಯ ರೈ, ಜತೆ ಕಾರ್ಯದರ್ಶಿ ರೇಷ್ಮಾ ಮೆಲ್ವಿನ್, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಮಾಜಿ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಪದ್ಮನಾಭ ಆಚಾರ್ಯ, ಪ್ರದೀಪ್ ಶಾಂತಿವನ, ಲಕ್ಷ್ಮಣ ಕೆ ಕಾಯಕಲ್ಪ, ಸಂದೇಶ್, ಮೋಹಿನಿ ಡಿ.ಶೆಟ್ಟಿ, ಎಂಡೋ ಸಲ್ಪಾನ್ ಸಂತ್ರಸ್ತರ ಪಾಲನಾ ಕೇಂದ್ರದ ವಿಶೇಷ ಶಿಕ್ಷಕಿ ಸವಿತಾ, ಫಿಜಿಯೋಥೆರಫಿಸ್ಟ್ ಮುಸ್ಕಾನ್, ಕ್ರಾಪ್ಟ್ ಶಿಕ್ಷಕಿ ಕಾವ್ಯಶ್ರೀ, ಅಡುಗೆ ಸಹಾಯಕಿ ದೀಪಿಕಾ, ಜವಾನ ಸುಮಿತ್ರಾ, ಶುಭಲತಾ, ಚಾಲಕರಾದ ರಾಜೇಂದ್ರ, ನಯನ್ ಕುಮಾರ್ ಉಪಸ್ಥಿತರಿದ್ದರು. ಈ ಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ಒಟ್ಟು 24 ಮಂದಿ ಎಂಡೋ ಸಲ್ಪಾನ್ ಪೀಡಿತ ಸಂತ್ರಸ್ತರಿದ್ದಾರೆ.

ವರ್ತಕರ ಸಂಘದ ಮೂಲಕ ಸಂಗ್ರಹಿಸಿದ 2  ಕ್ವಿಂಟಾಲ್ ಅಕ್ಕಿ, ಸಕ್ಕರೆ, ಚಾ ಹುಡಿ, ಗೋದಿ, ತೊಗರಿಬೇಳೆ, ಬೆಳ್ತಿಗೆ ಅಕ್ಕಿ, ಸೇಮಿಗೆ, ಬಟಾಣಿ, ಕೆಂಪು ಕಡ್ಲೆ, ಹೆಸರುಕಾಳು, ಹುರುಳಿ, ಬೆಳ್ಳುಳ್ಳಿ, ಕೊತ್ತಂಬರಿ, ಮೆಣಸು, ನೀರುಳ್ಳಿ, ಕಲ್ಲಂಗಡಿ, ಬಾದಾಮ್ ಹುಡಿ, ಚಾಕಲೇಟ್, 120  ತೆಂಗಿನಕಾಯಿ ಸೇರಿದಂತೆ ಎಲ್ಲಾ ಬಗೆಯ ದಿನಸಿ ಸಾಮಾಗ್ರಿಗಳು, ತೆಂಗಿನ ಎಣ್ಣೆ, ಮೊಟ್ಟೆ ಇತ್ಯಾದಿಗಳನ್ನು ನೀಡಲಾಯಿತು.

ವಾಟ್ಸಾಪ್ ಸಂದೇಶಕ್ಕೆ ವರ್ತಕರ ಸ್ಪಂದನೆ: ವರ್ತಕರ ಸಂಘದ ಈ ದೊಡ್ಡ ಕೊಡುಗೆಗೆ ಸಂಘದ ವಾಟ್ಸಾಪ್ ಗ್ರೂಪ್‌ನ ಸಂದೇಶ ಕಾರಣ. ಕಾರ್ಯದರ್ಶಿ ಭವ್ಯ ರೈ ಮತ್ತು ಮಾಜಿ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್.ರವರು ವಾಟ್ಸಫ್ ಗ್ರೂಪ್‌ನ್ನು ನಿರ್ವಹಿಸಿ, ಡೇಕೇರ್ ಸೆಂಟರ್‌ಗೆ ಸಹಕಾರ ನೀಡುವಂತೆ ಸಂದೇಶಗಳನ್ನು ಹಾಕಿದ್ದರು. ಈ ಸಂದೇಶಗಳಿಗೆ ಕೂಡಲೇ ಪ್ರತಿಕ್ರಿಯೆ ನೀಡಿದ ಸಂಘದ ಸದಸ್ಯರುಗಳು, ವರ್ತಕ ಬಂಧುಗಳು ವಾಟ್ಸಾಪ್ ಮೂಲಕವೇ ತಮ್ಮ ಸಹಕಾರವನ್ನು ಘೋಷಿಸಿ ಅದನ್ನು ಸಂಘಕ್ಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!