ಮನೆಯಿಂದ ಕಳವು ಪ್ರಕರಣ: ಆರೋಪಿ ಸೆರೆ
ಮಂಗಳೂರು: ನಗರದ ಜೆಪ್ಪಿನಮೊಗರುವಿನ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ – ಜತ್ ತಾಲೂಕಿನ ನರಳೆವಾಡಿ ಗ್ರಾಮದ ಸಮಧನ ಸಕಹರಿ ನರಳೆ (26) ಬಂಧಿತ ಆರೋಪಿ.
ಆ.4ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿ ಮನೆಯ ಕಪಾಟಿನಲ್ಲಿದ್ದ 14 ಗ್ರಾಂ ಚಿನ್ನದ ಸರ, ತಲಾ 2 ಗ್ರಾಂ ತೂಕದ 2 ಉಂಗುರ ಹಾಗೂ 25 ಸಾವಿರ ರೂ. ನಗದು ಕಳವುಗೈದಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ವಿಶೇಷ ಪೊಲೀಸ್ ತಂಡವು ಆ.11ರಂದು ಆರೋಪಿ ತಲಪಾಡಿ ಬಸ್ ನಿಲ್ದಾಣದ ಬಳಿಯಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಿತು. ಆರೋಪಿ ಕಳವು ಮಾಡಿರುವ ಸೊತ್ತುಗಳನ್ನು ಮತ್ತು ಕೃತ್ಯಕ್ಕೆ ಬಳಸಿರುವ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


