ರಾಜ್ಯ ಸರಕಾರದಿಂದ ಅನ್ನಭಾಗ್ಯದ ಜೊತೆಗೆ ಇಂದಿರಾ ಕಿಟ್
ಬಡವರಿಗೆ ನೆಮ್ಮದಿಯ ಬದುಕಿಗೆ ಸರ್ಕಾರದಿಂದ ಮಹತ್ವದ ಕೊಡುಗೆ: ಶಾಸಕ ಅಶೋಕ್ ರೈ
ಪುತ್ತೂರು: ಕರ್ನಾಟಕ ಸರಕಾರ ಅನ್ನಭಾಗ್ಯ ಯೋಜನೆಯಡಿ ಇಂದಿರಾ ಕಿಟ್ ನೀಡಲು ಸಂಪುಟ ಸಮಿತಿ ಸಭೆಯಲ್ಲಿ ನಿರ್ಧಾರವಾಗಿದ್ದು ಈ ನಿರ್ಧಾರ ಅತ್ಯಂತ ಪ್ರಯೋಜನಕಾರಿಯಾಗಿದ್ದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಬಡವರಿಗೆ ನೆಮ್ಮದಿಯ ಬದುಕು ನೀಡಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅಭಿಪ್ರಾಯಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿಯನ್ನು ನೀಡುತ್ತಿರುವ ಕಾರಣ ಅಕ್ಕಿ ಕಾಳಸಂತೆಯಲ್ಲೂ ಮಾರಾಟವಾಗುತ್ತಿದೆ, ಮತ್ತು ಹೆಚ್ಚು ನೀಡುತ್ತಿರುವ ಕಾರಣ ಇದನ್ನು ಬೇಕಾ ಬಿಟ್ಟಿ ಬಳಕೆಯಾಗುತ್ತಿದೆ ಎಂಬ ವಿಚಾರ ಸರಕಾರದ ಗಮನಕ್ಕೆ ಬಂದಿರುವ ಕಾರಣ ಹತ್ತು ಕೆ ಜಿ ಅಕ್ಕಿಯನ್ನು 5 ಕೆ ಜಿ ಇಳಿಸಲು ಸರಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು 5 ಕೆ ಜಿ ಅಕ್ಕಿಯ ಬದಲಾಗಿ ಇಂದಿರಾ ಕಿಟ್ ನೀಡಲು ಸರಕಾರ ತೀರ್ಮಾನವನ್ನು ಕೈಗೊಂಡಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಕರ್ನಾಟಕ ಸರಕಾರ ನೀಡಲಿರುವ ಇಂದಿರಾ ಕಿಟ್‌ನಲ್ಲಿ 2 ಕೆ ಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕಿಲೋ ಸಕ್ಕರೆ, ಮತ್ತು 1 ಕಿಲೋ ಉಪ್ಪು ದೊರೆಯಲಿದೆ.
ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಈ ಕಿಟ್ ಹೊಸ ಆಶಾಭಾವನೆಯನ್ನು ಮೂಡಿಸಿದ್ದು ಮುಂದಿನ ದಿನಗಳಲ್ಲಿ ಬಡವರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದ್ದು ಇದು ಕರ್ನಾಟಕದ ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದ್ದು, ಕಾಂಗ್ರೆಸ್ ಎಂದೆಂದೂ ಬಡವರ ಪರ ಎಂಬುದು ಸಾಬೀತಾಗಿದೆ ಎಂದು ಶಾಸಕರು ಅಭಿಪ್ರಾಯಿಸಿದ್ದಾರೆ.



