ಅನಾರೋಗ್ಯ ಪೀಡಿತರ ಚಿಕಿತ್ಸಾ ನೆರವು: ತಕ್ಷಣ ಪಡಿತರ ಚೀಟಿ: ಶಾಸಕ ಅಶೋಕ್ ರೈ ಮನವಿಗೆ ಸರಕಾರದ ಆದೇಶ
ಪುತ್ತೂರು: ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ನೆರವು ಉದ್ದೇಶ ಹೊಂದುವ ಸಾರ್ವಜನಿಕರಿಗೆ ತಕ್ಷಣ ಬಿಪಿಎಲ್ ಪಡಿತರ ಚೀಟಿ ನೀಡುವಂತೆ ಸರಕಾರ ಆದೇಶ ಮಾಡಿದ್ದು ಶಾಸಕ ಅಶೋಕ್ ರೈ ಮನವಿಗೆ ಸಚಿವ ಮುನಿಯಪ್ಪ ಸ್ಪಂದಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಪಡಿತರ ಚೀಟಿ ಪ್ರಕ್ರಿಯೆ ನಡೆಯುತ್ತಿರಲಿಲ್ಲ ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಅನಾರೋಗ್ಯ ಪೀಡಿತರಿಗೆ ಬಿಪಿಎಲ್ ಪಡಿತರ ಚೀಟಿ ಇದ್ದಲ್ಲಿ ಚಿಕಿತ್ಸೆಗೆ ನೆರವು ಪಡೆಯಲು ಸಾಧ್ಯವಿದ್ದು, ಪಡಿತರ ಚೀಟಿ ಆಗದೇ ಇರುವ ಕಾರಣ ಸಂಕಷ್ಟ ಎದುರಾಗಿತ್ತು. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದ ಶಾಸಕರು ಅನಾರೋಗ್ಯ ಪೀಡಿತರಿಗೆ ಪಡಿತರ ಚೀಟಿ ಮಾಡಿಸಲು ಅನುವು ಮಾಡುವಂತೆ ಮನವಿ ಮಾಡಿದ್ದರು. ಸುಮಾರು 42 ವಿವಿಧ ಕಾಯಿಲೆಗಳಿದ್ದ ರೋಗಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ನಾಳೆಯಿಂದ ಈ ಯೋಜನೆ ಮತ್ತೆ ಕಾರ್ಯಪೃವೃತ್ತವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.




