ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ನ ಸಚಿವರೇ ಪ್ರಯತ್ನ ಮಾಡುತ್ತಿದ್ದಾರೆ: ಬಿ.ವೈ ವಿಜಯೇಂದ್ರ
ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿ ರೂ.50 ಕೋಟಿ ಆಮಿಷವೊಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನಿರಾಕರಿಸಿದ್ದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ನ ಸಚಿವರೇ ಪ್ರಯತ್ನ ಮಾಡುತ್ತಿದ್ದು, ಅವರಿಗೆ ಭಯಪಡಬೇಕಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ತಮ್ಮ ಆರೋಪವನ್ನು ಸಾಕ್ಷ್ಯಾಧಾರಗಳೊಂದಿಗೆ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ ಗೆದ್ದು ಬಿಟ್ಟಿದ್ದೇವೆ ಎಂದು ಭ್ರಮೆಯಲ್ಲಿದ್ರು ಆದ್ರೆ, ರಾಜ್ಯದ ಭ್ರಷ್ಟಾಚಾರ ಪರಿಣಾಮ ಹರಿಯಾಣದಲ್ಲಿ ಚುನಾವಣೆ ಸೋತ್ರು. ಮಹಾರಾಷ್ಟ್ರ ಚುನಾವಣೆಯಲ್ಲೂ ಸೋಲುತ್ತಾರೆ. ಬೈ ಎಲೆಕ್ಸನ್ ನಲ್ಲಿ ಸೋಲುತ್ತಿದ್ದೇವೆಂದು ಕಾಂಗ್ರೆಸ್ ಗೆ ಗೊತ್ತಾಗಿದೆ. ಕಾಂಗ್ರೆಸ್ ನ ಘಟಾನುಘಟಿಗಳೇ ಸಾವಿರಾರು ಕೋಟಿ ಪಡೆದುಕೊಂಡು ಕಾಂಗ್ರೆಸ್ ಶಾಸಕರನ್ನೇ ಖರೀದಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.