ಪುತ್ತೂರಿನ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹1.31 ಕೋಟಿ ವಂಚನೆ!
ಪುತ್ತೂರು: ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಮುಂಬೈ ಪೊಲೀಸ್ ಹಾಗೂ ATS ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು, ಪಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಬಂಧನದ ಭೀತಿ ಹುಟ್ಟಿಸಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬರೋಬ್ಬರಿ ₹1,31,50,000 (1.31 ಕೋಟಿ ರೂ.) ವಂಚಿಸಿರುವ ಘಟನೆ ನಡೆದಿದೆ.

ಆರೋಪಿಗಳು ವಾಟ್ಸಾಪ್ ವಿಡಿಯೋ ಕರೆಗಳ ಮೂಲಕ ದೂರುದಾರರನ್ನು ನಿರಂತರವಾಗಿ ಬೆದರಿಸಿದ್ದಾರೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ.
ಆರೋಪಿಗಳ ಮಾತನ್ನು ನಂಬಿದ ದೂರುದಾರರು 2026ರ ಸೆಪ್ಟೆಂಬರ್ 2ರಿಂದ ಅಕ್ಟೋಬರ್ 6ರವರೆಗೆ ಹಂತ ಹಂತವಾಗಿ ಒಟ್ಟು ₹1,31,50,000 ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.
ನಂತರ ತಾವು ಸೈಬರ್ ವಂಚನೆಗೆ ಬಲಿಯಾಗಿರುವುದನ್ನು ಅರಿತ ದೂರುದಾರರು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ಈ ಸಂಬಂಧ CCPS DK ಪೊಲೀಸ್ ಠಾಣೆಯಲ್ಲಿ ಅ.ಕ್ರ. 42/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

