ಕರಾವಳಿ

ಕಲ್ಮಡ್ಕ: ಮೀನು ಹಿಡಿಯಲು ತೆರಳಿದ್ದ ಇಬ್ಬರು ವಿದ್ಯುತ್ ಪ್ರವಹಿಸಿ ಮೃತ್ಯು, ಬಾಲಕನಿಗೆ ಗಾಯ


ಸುಳ್ಯ: ಮೀನು ಹಿಡಿಯಲು ತೆರಳಿದ್ದ ಇಬ್ಬರು ವ್ಯಕ್ತಿಗಳು ತೋಟಕ್ಕೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಹೊಳೆಕ್ಕೆರೆ ಎಂಬಲ್ಲಿ ಅಕ್ಟೋಬರ್ 12ರಂದು ನಡೆದಿದೆ.

ಮೃತರನ್ನು ಕಲ್ಮಡ್ಕದ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ರಮೇಶ್ @ ಗಣೇಶ್ (36) ಎಂದು ಗುರುತಿಸಲಾಗಿದೆ. ಇವರೊಂದಿಗೆ ಮೀನು ಹಿಡಿಯಲು ತೆರಳಿದ್ದ ಅಪ್ರಾಪ್ತ ಬಾಲಕನೊಬ್ಬ ಗಾಯಗೊಂಡಿದ್ದಾನೆ.



ಮೂವರೂ ಕಲ್ಮಡ್ಕ ಗ್ರಾಮದ ಹೊಳೆಕ್ಕೆರೆ ಎಂಬಲ್ಲಿನ ತೋಡಿನಲ್ಲಿ ಹರಿಯುವ ನೀರಿನಲ್ಲಿ ಮೀನು ಹಿಡಿಯುತ್ತಾ ಮುಂದೆ ಸಾಗುತ್ತಿದ್ದಾಗ, ಸಮೀಪದ ಮಧುಸೂದನ್ ಭಟ್ ಎಂಬವರ ತೋಟದಿಂದ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಬಾಲಕ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಗಾಯಾಳುಗಳನ್ನು ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಭರತ್ ಮತ್ತು ರಮೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಅಳವಡಿಸಿದ ಆರೋಪದ ಮೇರೆಗೆ ಮಧುಸೂದನ್ ಭಟ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 105 ಹಾಗೂ ವಿದ್ಯುತ್ ಕಾಯ್ದೆಯ ಕಲಂ 135(1)(E) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!