ಫಾತಿಮತ್ ನಿಶಾನ ಕೊಲೆ ಪ್ರಕರಣ: ಎಲ್ಲ ಆರೋಪಿಗಳಿಗೂ ಜಾಮೀನು
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕಡಪಾಲ ಎಂಬಲ್ಲಿನ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮೂವರೂ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ದಿನಾಂಕ 18.07.2026ರಂದು ರಾತ್ರಿ ಸಮಯ ನಿಶಾನ ಅವರನ್ನು ಆಕೆಯ ಮಾವ, ಅತ್ತೆ ಮತ್ತು ನಾದಿನಿ ಸೇರಿಕೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೃತಳ ತಾಯಿ ಕುಂಬ್ರ ಸಾರೆಪುಣಿಯ ಜುಬೈದ ಎಂಬವರು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸರು ಸಂಪಾಜೆ ಯ ಕಡಪಾಲ ಎಂಬಲ್ಲಿನ ಅಲವಿ, ಆಯಿಷಾ ಮತ್ತು ಫಸೀಲಾ ಎಂಬವರನ್ನು ಬಂಧಿಸಿದ್ದರು. ಸದರಿ ದೂರಿನ ಮೇರೆಗೆ ಎಲ್ಲಾ ಮೂರು ಆರೋಪಿಗಳನ್ನು ದಿನಾಂಕ 22/7/2026 ರಂದು ಸುಳ್ಯ ಪೊಲೀಸ್ ಠಾಣೆಗೆ ಕರೆಸಿ ಕೊಂಡು ಅವರು ನೀಡಿದ್ದಾರೆ ಎನ್ನಲಾದ ತಪ್ಪು ಒಪ್ಪಿಗೆ ಆಧಾರದ ಮೇರೆಗೆ ಸುಳ್ಯ ಪೊಲೀಸ್ ವೃತ ನಿರೀಕ್ಷಕರು ಆರೋಪಿಗಳನ್ನು ದಸ್ತಗಿರಿ ಮಾಡಿ ದಿನಾಂಕ 23.07.2026ರಂದು ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್. ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ನಂತರ ಆರೋಪಿ ಆಯಿಷ ಮತ್ತು ಫಸೀಲಾ ರವರ ಪರವಾಗಿ ಜಾಮೀನಿಗಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ದಿನಾಂಕ 31.08.2026ರಂದು ಆದೇಶವನ್ನು ಮಾಡಿರುತ್ತಾರೆ. ಆದರೆ ಒಂದನೇ ಆರೋಪಿಯಾದ ಅಲವಿ ಜೈಲಿನಲ್ಲೇ ಇದ್ದು ಅವರ ಪರವಾಗಿ ಜಾಮೀನಿಗಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಜಾಮೀನು ಅರ್ಜಿಯ ಮೇಲೆ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯದ ನ್ಯಾಯಧೀಶರು ಆರೋಪಿ ಅಲವಿ ರವರನ್ನು ಶರ್ತ ಬದ್ಧ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿ ದಿನಾಂಕ 05.10.2026ರಂದು ಆದೇಶವನ್ನು ಮಾಡಿರುತ್ತಾರೆ. ಹಾಗಾಗಿ ಈ ಪ್ರಕರಣದ ಎಲ್ಲಾ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆ ಆದಂತಾಗಿದೆ.

