ಅಂತಾರಾಷ್ಟ್ರೀಯಕ್ರೀಡೆ

ವಿಚಿತ್ರ ರೀತಿಯ ರನೌಟ್‌ಗೆ ಬಲಿಯಾದ ತಿಲಕ್ ವರ್ಮಾ



ಇಂದೋರ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.


ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ತಿಲಕ್ ವರ್ಮಾ ಮತ್ತು ಅಕ್ಸರ್ ಪಟೇಲ್ ಈ ಎಡವಟ್ಟು ಮಾಡಿಕೊಂಡಿದ್ದರು.
ವೆಸ್ಟ್ ಇಂಡೀಸ್‌ನ ಗುದಕೇಶ್ ಮೋತಿ ಎಸೆದ 17ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಲೆಗ್ ಸೈಡ್‌ನಿಂದ ಹೊರಹೋದ ಫುಲ್ ಟಾಸ್ ಎಸೆತವನ್ನು ಅಕ್ಷರ್ ಪಟೇಲ್ ಬಲವಾಗಿ ಫ್ಲಿಕ್ ಮಾಡಿದರು. ಬಳಿಕ ಇಬ್ಬರೂ ಬ್ಯಾಟರ್‌ಗಳು ಒಂದು ರನ್ ಪೂರ್ಣಗೊಳಿಸಿದರು. ಆದರೆ, ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿದ ಅವರು ಎರಡನೇ ರನ್‌ಗಾಗಿ ಮುಂದುವರಿಯುವ ಬದಲು ಪಿಚ್‌ನ ಮಧ್ಯಭಾಗದಲ್ಲಿ ನಿಂತು ಮಾತುಕತೆ ಆರಂಭಿಸಿದರು. ಅಕ್ಸರ್ ಪಟೇಲ್ ತಮ್ಮ ಸ್ಟ್ರೈಕರ್ ತುದಿಗೆ ಮರಳುತ್ತಿದ್ದಾಗ, ಚೆಂಡು ಇನ್ನೂ ಆಟದಲ್ಲಿರುವುದನ್ನು ಅರಿತ ವೆಸ್ಟ್ ಇಂಡೀಸ್ ಆಟಗಾರರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿ, ಚೆಂಡನ್ನು ಎಸೆದರು. ವಿಕೆಟ್ ಕೀಪರ್ ಶಾಯ್ ಹೋಪ್ ತಮ್ಮ ತುದಿಯಲ್ಲಿ ರನೌಟ್ ಮಾಡಲು ಪ್ರಯತ್ನಿಸಿದ ಬಳಿಕ ಚೆಂಡನ್ನು ಮೋತಿಗೆ ಎಸೆದರು.


ಮೋತಿ ಚೆಂಡನ್ನು ಹಿಡಿದು ತಿಲಕ್ ವರ್ಮಾ ಇದ್ದ ತುದಿಯ ವಿಕೆಟ್‌ನ ಬೇಲ್ಸ್‌ಗಳನ್ನು ಎಗರಿಸಿದರು. ಮೂರನೇ ಅಂಪೈರ್ ಪರಿಶೀಲಿಸಿದಾಗ ಅಕ್ಷರ್ ಪಟೇಲ್ ತಮ್ಮ ಕ್ರೀಸ್ ತಲುಪಿದ್ದರೂ, ತಿಲಕ್ ವರ್ಮಾ ಮಾತ್ರ ಕ್ರೀಸ್‌ನಿಂದ ಬಹಳ ದೂರದಲ್ಲಿರುವುದು ಸ್ಪಷ್ಟವಾಯಿತು. ಹೀಗಾಗಿ ತಿಲಕ್ ರನೌಟ್ ಎಂದು ತೀರ್ಪು ನೀಡಲಾಯಿತು.
ಅಕ್ಸರ್ ಪಟೇಲ್ ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಫೀಲ್ಡರ್ ಡೈವ್ ಹೊಡೆದು ಹಿಡಿಯಲು ಪ್ರಯತ್ನಿಸಿದ್ದು ಈ ವೇಳೆ ಚೆಂಡು ಅವರ ಕೈಯಿಂದ ತಪ್ಪಿ ಬೌಂಡರಿ ಗೆರೆ ದಾಟಲಿದೆ ಎನ್ನುವಷ್ಟರಲ್ಲಿ ಅವರು ಕ್ಷಿಪ್ರ ಗತಿಯಲ್ಲಿ ವಾಪಸ್ ಚೆಂಡನ್ನು ತಡೆದು ಥ್ರೋ ಮಾಡಿದ್ದರು. ಇದನ್ನು ಅರಿಯದ ತಿಲಕ್ ವರ್ಮಾ ಹಾಗೂ ಅಕ್ಸರ್ ಪಟೇಲ್ ಪರಸ್ಪರ ಮಾತುಕತೆ ನಡೆಸಿ ವಾಪಾಸ್ ಕ್ರೀಸ್ ತಲುಪುವ ವೇಳೆ ವೆಸ್ಟ್ ಇಂಡೀಸ್ ಆಟಗಾರರು ಕೈಚಳಕ ತೋರಿಸಿ ತಿಲಕ್ ವರ್ಮಾ ಅವರನ್ನು ಔಟ್ ಮಾಡಿದರು.

Leave a Reply

Your email address will not be published. Required fields are marked *

error: Content is protected !!