ಅಬ್ದುಲ್ ಅಜೀಜ್ ಪವಿತ್ರ ಅವರಿಂದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಭೇಟಿ
ಬೆಂಗಳೂರು: ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರನ್ನು ಅಬ್ದುಲ್ ಅಜೀಜ್ ಪವಿತ್ರ ಅವರು ವಿಧಾನ ಸೌಧದ ಅವರ ಕಚೇರಿಯಲ್ಲಿ ಭೇಟಿಯಾಗಿ ಕೊಲ್ಲಿ ರಾಷ್ಟ್ರದಲ್ಲಿರುವ ಪ್ರವಾಸಿಗಳಿಗೆ ಸಂಬಂಧಿಸಿದ ಅಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಕೊಲ್ಲಿ ರಾಷ್ಟ್ರಕ್ಕೆ ದುಡಿಯಲು ಹೋದ ಕೆಲವಾರು ಮಂದಿ ಕೆಲವು ತೊಂದರೆಗಳಲ್ಲಿ ಸಿಲುಕಿ ಜೈಲಿನಲ್ಲಿದ್ದು ಅವರ ಬಿಡುಗಡೆಗಾಗಿ ಪ್ರಯತ್ನ ಮಾಡುವ ಬಗ್ಗೆ, ಹಣಕಾಸು ಸಮಸ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಇಖಾಮಾ ಮುಂತಾದ ಪರ್ಮಿಟ್ ಮಾಡದೆ ತಾಯ್ನಾಡಿಗೆ ಬರಲಾಗದೆ ಸಿಲುಕಿಕೊಂಡವರಿಗೆ ಹೇಗೆ ಸಹಕರಿಸಬೇಕು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಅಲ್ಲದೆ ಈ ಹಿಂದೆ ಅನಿವಾಸಿ ಕನ್ನಡಿಗರು ಕೇಳಿಕೊಂಡ ಬೇಡಿಕೆಯ ಬಗ್ಗೆ ನೆನಪಿಸಿದರು.
ಆದಷ್ಟು ಬೇಗ ನಿಮ್ಮ ಮನವಿಗಳನ್ನು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನೆರವೇರಿಸಲು ಪ್ರಯತ್ನಿಸುತ್ತೇನೆ, ಯಾವುದೇ ತೊಂದರೆ ಅಥವಾ ಕಷ್ಟದಲ್ಲಿ ಸಿಲುಕಿದಲ್ಲಿ ಅದಕ್ಕೆ ತಕ್ಷಣ ಪರಿಹಾರ ಮಾರ್ಗ ಒದಗಿಸಲು ಸದಾ ನಾನು ನಿಮ್ಮೋದಿಗಿದ್ದೇನೆ ಎಂದು ಆರತಿ ಕೃಷ್ಣ ಭರವಸೆ ನೀಡಿದರು.
ಅಲ್ಲದೇ ಎನ್.ಆರ್.ಐ ಫಾರಂ ಇನ್ಷೂರೆನ್ಸ್ ಪದ್ಧತಿ ಕೂಡಲೇ ಆರಂಭಿಸಬೇಕು, ಕೆ.ಎನ್.ಆರ್.ಐ ವೆಬ್‌ಸೈಟ್ ಮಾಡಿ ಅನಿವಾಸಿ ಕನ್ನಡಿಗರ ಸರ್ವೆ ಮಾಡಬೇಕು, ವಿದೇಶ ಜೀವನ ಕೊನೆಗೊಳಿಸಿ ತಾಯ್ನಾಡಿನಲ್ಲಿರುವ ಬಡ ಅನಿವಾಸಿಗಳಿಗೆ ಸ್ವಉದ್ಯೋಗಕ್ಕಾಗಿ ಸರಕಾರದಿಂದ ಸಹಾಯ ಮಾಡಬೇಕು. ಅನಿವಾಸಿ ಕೇಂದ್ರದಲ್ಲಿ ಅವಶ್ಯ ಸಮಯಕ್ಕೆ ಸಹಕರಿಸಲು ಅನುಭವಿ ಪ್ರವಾಸಿಯೊಬ್ಬರನ್ನು ಸರಕಾರದ ಪ್ರತಿನಿಧಿಯನ್ನಾಗಿ ನೇಮಿಸಬೇಕು ಎಂದು ಅಬ್ದುಲ್ ಅಜೀಜ್ ಪವಿತ್ರ ಒತ್ತಾಯಿಸಿದರು.
ಬಹರೈನ್‌ನಿಂದ ಬಂದ ಕನ್ನಡ ಸಂಘದ ಅಧ್ಯಕ್ಷ ಅಮರನಾಥ ರೈ ಹಾಗೂ ಬಾಲಕೃಷ್ಣ ಶೆಟ್ಟಿ ಬೆಂಗಳೂರು ಈ ಸಂದರ್ಭದಲ್ಲಿ ಜೊತೆಗಿದ್ದರು. ನಮ್ಮ ಬೇಡಿಕೆಗೆ ಆರತಿ ಕೃಷ್ಣ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದು ಬೇಡಿಕೆ ಈಡೇರುವ ವಿಶ್ವಾಸದಲ್ಲಿ ನಾವಿದ್ದೇವೆ ಎಂದು ಅನಿವಾಸಿ ಕನ್ನಡಿಗರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಬ್ದುಲ್ ಅಜೀಜ್ ತಿಳಿಸಿದ್ದಾರೆ