ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರಿನಲ್ಲಿ ವಿರೋಧ?
ಪುತ್ತೂರು : ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರನ್ನು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷಕ್ಕೆ ಬರ ಮಾಡಿಕೊಂಡ ಬೆನ್ನಲ್ಲೇ ಪುತ್ತಿಲ ಅವರ ಸ್ವಕ್ಷೇತ್ರ ಪುತ್ತೂರಿನಲ್ಲಿ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಮಾಹಿತಿ ಲಭ್ಯವಾಗಿದೆ.
ಅರುಣ್ ಪುತ್ತಿಲ ಕೆಲವು ಶರತ್ತುಗಳೊಂದಿಗೆ ಪುತ್ತೂರಿನಲ್ಲೇ ಪಕ್ಷ ಸೇರ್ಪಡೆಯಾಗಲಿ ಎಂದು ಕಾರ್ಯಕರ್ತರು ಮತ್ತು ಕೆಲ ನಾಯಕರು ಪಟ್ಟು ಹಿಡಿದಿದ್ದು, ಮಾ.15ರಂದು ಪುತ್ತೂರು ಬಿಜೆಪಿ ಕಛೇರಿ ಬಳಿ ಬಿಜೆಪಿ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.
ಮಾ.15ರಂದು ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪುತ್ತೂರು ಬಿಜೆಪಿ ಕಛೇರಿಗೆ ಆಗಮಿಸಿ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಸಭೆ ಬಿಜೆಪಿ ಕಚೇರಿಯಲ್ಲಿ ಬಾಗಿಲು ಮುಚ್ಚಿ ನಡೆದಿದ್ದು ಮಾಧ್ಯಮದವರಿಗೂ ಪ್ರವೇಶ ನಿರಾಕರಿಸಲಾಗಿತ್ತು. ಸಭೆಯಲ್ಲಿ ಅರುಣ್ ಪುತ್ತಿಲರಿಗೆ ಯಾವುದೇ ಸ್ಥಾನಮಾನ ನೀಡದಂತೆಯೂ ಕಾರ್ಯಕರ್ತರು ಅಧ್ಯಕ್ಷರಿಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಪುತ್ತಿಲ ಸೇರ್ಪಡೆಗೆ ಕೆಲವು ಷರತ್ತುಗಳನ್ನು ಕೂಡಾ ವಿಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರುಣ್ ಪುತ್ತಿಲ ಅವರು ಪುತ್ತಿಲ ಪರಿವಾರವನ್ನು ವಿಸರ್ಜಿಸಬೇಕು, ಪುತ್ತೂರಲ್ಲೇ ಅವರು ಪಕ್ಷ ಸೇರಬೇಕು, ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆ ನೀಡಬಾರದು, ಪುತ್ತೂರು ಮಂಡಲ ಅಧ್ಯಕ್ಷರ ನೇಮಕವಾದ ಬಳಿಕವೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬಿತ್ಯಾದಿ ಆಗ್ರಹ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಗೆ ಪುತ್ತೂರಲ್ಲಿ ಬಿಜೆಪಿ ಯೊಳಗೆ ವಿರೋಧ ವ್ಯಕ್ತವಾಗಿದ್ದು ಇದು ಮುಂದಕ್ಕೆ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎನ್ನುವ ಕುತೂಹಲ ಮೂಡಿದೆ.