ಕರಾವಳಿರಾಜ್ಯ

ನಾನು ಕಂಡ ಅತ್ಯುತ್ತಮ ಮಹಿಳಾ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್



ಓರ್ವ ಪತ್ರಕರ್ತನಾಗಿ ಈ ಅಧಿಕಾರಿಯ ಬಗ್ಗೆ ಎರಡು ವಾಕ್ಯಗಳನ್ನು ಬರೆಯಲೇಬೇಕೆಂದು ಮನಸ್ಸಿಗೆ ತೋಚಿತು.ಕಾರಣ ಈ ಅಧಿಕಾರಿ ಕಳೆದ ಮೂರು ವರ್ಷಗಳಿಂದ ಪುತ್ತೂರು ವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ ವೈಖರಿ ಅಷ್ಟೊಂದು ಉತ್ತಮವಾಗಿತ್ತು. ಕಠಿಣ ಸಂದರ್ಭಗಳಲ್ಲೂ ಕೂಡ ನಿಸ್ವಾರ್ಥ, ಜವಾಬ್ದಾರಿಯುತ ಕರ್ತವ್ಯವನ್ನು ಮಾಡುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ನೂರಕ್ಕೆ ನೂರು ಶ್ರಮಿಸಿದವರು.

ಕರ್ತವ್ಯದಲ್ಲಿ ಖಡಕ್ ಅಧಿಕಾರಿಯಾಗಿದ್ದರೂ ಅಷ್ಟೇ ಜನ ಸ್ನೇಹಿ ಅಧಿಕಾರಿಯಾಗಿಯೂ ಗುರುತಿಸಿಕೊಂಡ ಇವರು ಸುಳ್ಯದಲ್ಲಿ ನಡೆದ ನೂರಾರು ಕಾನೂನು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಕಾನೂನು ಜಾಗೃತಿಯನ್ನು ಮೂಡಿಸಿದವರು.

ತಮ್ಮ ವ್ಯಾಪ್ತಿಗೆ ಬರುವ ಬೆಳ್ಳಾರೆ ಪರಿಸರದಲ್ಲಿ ಇಡೀ ದೇಶವೇ ಸುಳ್ಯದತ್ತ ದೃಷ್ಟಿ ಆಯಿಸಿದ ಘಟನೆ ಕಳೆದ ಎರಡು ವರ್ಷಗಳ ಹಿಂದೆ ನಡೆದ ಎರಡು ಹತ್ಯೆ ಪ್ರಕರಣಗಳು. ಈ ಸಂದರ್ಭದಲ್ಲಿ ದಿಟ್ಟ ಅಧಿಕಾರಿಯಾಗಿ ಎದೆಗುಂದದೆ ಆರೋಪಿಗಳ ಪತ್ತೆಗಾಗಿ ಹಿರಿಯ ಅಧಿಕಾರಿಗಳ ಆದೇಶದಂತೆ ಅನೇಕ ತನಿಖಾ ತಂಡಗಳನ್ನು ರಚಿಸಿ ಹಗಲು ಇರುಳು ಶ್ರಮಿಸಿ ಯಶಸ್ಸು ಪಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಅಧಿಕಾರಿಗಳಲ್ಲಿ ಓರ್ವರು ಇವರಾಗಿದ್ದರು. ಕೆಲವು ಧಾರ್ಮಿಕ ಕೇಂದ್ರಗಳ ಕಾರ್ಯಕ್ರಮಕ್ಕೆ ಸಂಬಂಧಿಸಿ ವಿವಾದಗಳು ಬಂದಾಗ ಅತ್ಯಂತ ಸೂಕ್ಷ್ಮತೆಯಿಂದ ನಿಭಾಯಿಸಿ ಶಾಂತಿ ಕಾಪಾಡುವಲ್ಲಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದವರು ಇವರು.


ಎಷ್ಟೇ ದೊಡ್ಡ ಪ್ರಕರಣವಾಗಿರಲಿ ಮೌನವಾಗಿಯೇ ಎದುರಿಸುತ್ತಿದ್ದ ಇವರು ಅಪರಾಧ ಜಗತ್ತಿಗೆ ಚಾಲೆಂಜ್ ನೀಡಬಲ್ಲ ಧೈರ್ಯವಂತೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದವರು.

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳನ್ನು ಗೌರವದಿಂದ ಕಾಣುತ್ತಿದ್ದ ಇವರು ಎಲ್ಲರೊಂದಿಗೆ ಬೆರೆತು ಕರ್ತವ್ಯ ಪಾಲನೆ ಮಾಡುತ್ತಿದ್ದ ದೃಶ್ಯಗಳನ್ನು ಹಲವು ಬಾರಿ ನಾನು ವರದಿ ಮಾಡಲು ತೆರಳಿದಾಗ ಕಂಡಂತಹ ಸತ್ಯಗಳು.ಈ ಕಾರಣಗಳಿಂದ ಇಂದು ಅವರ ಬಗ್ಗೆ ಎರಡು ವಾಕ್ಯಗಳನ್ನು ಬರೆಯಲು ಮನಸ್ಸು ಮುಂದಾಯಿತು.

ಮುಂದಿನ ದಿನಗಳಲ್ಲಿಯೂ ಕೂಡ ಅವರ ಸೇವಾ ಕಾರ್ಯವನ್ನು ನಮ್ಮಂತೆ ಇತರರು ಕೂಡ ಗುರುತಿಸುವಂತಾಗಲಿ ಎಂಬುದೇ ಆಶಯ.

✍️ಹಸೈನಾರ್ ಜಯನಗರ, ಪತ್ರಕರ್ತರು

Leave a Reply

Your email address will not be published. Required fields are marked *

error: Content is protected !!