ಕರಾವಳಿ

ಸರಕಾರಿ ಶಾಲೆಗೆ ಸುಣ್ಣ ಬಣ್ಣ.. ಶಾಲೆಗಳಲ್ಲಿ ಸ್ವಚ್ಛತೆ, ಶ್ರಮದಾನದ ಮೂಲಕ ಮಾದರಿಯಾದ ಅಂಬೇಡ್ಕರ್ ರಕ್ಷಣಾ ವೇದಿಕೆಸುಳ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ನಾಗಪಟ್ಟಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರ ಭಾಗದ ಗೋಡೆಗಳು ಮತ್ತು ಶಾಲಾ ಪರಿಸರದ ಕಂಬಗಳು,ಧ್ವಜಸ್ತಂಬಕ್ಕೆ ಬಣ್ಣ ಬಳಿದು ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ.

ಸಂಘಟನೆಯ ವತಿಯಿಂದ ಸಂಪೂರ್ಣ ಬಣ್ಣದ ಮೊತ್ತವನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗಪಟ್ಟಣ ಘಟಕದ ಸದಸ್ಯರಿಂದ ಸಂಗ್ರಹಿಸಿ ಈ ಕಾರ್ಯವನ್ನು ಮಾಡಿರುವುದು ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸ್ವಾತಂತ್ರೋತ್ಸವ ದಿನಾಚರಣೆಯಂದು ಶಾಲಾ ಶಿಕ್ಷಕರು ಸಂಘಟನೆಯ ಮುಖ್ಯಸ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆಯನ್ನು ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಎಂ ಅಂಬೇಡ್ಕರ್ ರಕ್ಷಣಾ ವೇದಿಕೆ ಸಂಘಟನೆಯು ಸೇವಾ ಮನೋಭಾವನೆಯನ್ನು ಹೊಂದಿಕೊಂಡಿದ್ದು ನಮ್ಮ ಶಾಲೆಗೆ ಉಚಿತವಾಗಿ ಶ್ರಮದಾನದ ಮೂಲಕ ಬಣ್ಣವನ್ನು ಬಳಿದು ಶಾಲೆಯ ಸ್ವಚ್ಛತೆಯನ್ನು ಮಾಡಿಕೊಟ್ಟಿರುವುದು ಸರ್ಕಾರಿ ಶಾಲೆಯ ಬಗ್ಗೆ ಇವರಲ್ಲಿ ಇರುವ ಗೌರವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಶ್ರಮದಾನದಲ್ಲಿ ಸಂಘಟನೆಯ ನಾಗಪಟ್ಣ ಘಟಕದ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಅರಸು ರತ್ನಂ,ಕಾರ್ಯದರ್ಶಿ ಗುರುರಾಜ್,ಉಪಾಧ್ಯಕ್ಷ ಅಶೋಕ,ಜೊತೆ ಕಾರ್ಯದರ್ಶಿ ಶ್ರೀಕಾಂತ್,ಸದಸ್ಯರುಗಳಾದ ಗುಣರೇಲನ್,ಜಗದೀಶ್, ರಾಜೇಶ್,ಮುರಳಿ, ಗೋವಿಂದರಾಜ್,ಪುರುಷೋತ್ತಮ ಮೊದಲಾದವರು ಪಾಲ್ಗೊಂಡಿದ್ದರು.

ಈ ಬಗ್ಗೆ ಮಾತನಾಡಿರುವ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ‘ಶಾಲೆಗಳು ವಿದ್ಯಾ ಮಂದಿರವಾಗಿದ್ದು ಇದನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದು  ಸರ್ಕಾರಿ ಶಾಲೆ ಉಳಿಯಲಿ ಮತ್ತು ಬೆಳೆಯಲಿ ಎಂಬ ಉದ್ದೇಶದೊಂದಿಗೆ ಸಂಘಟನೆಯ ವತಿಯಿಂದ ಸರ್ಕಾರಿ ಶಾಲೆಗಳ ಬಗ್ಗೆ ಮುತುವರ್ಜಿಯನ್ನು ವಹಿಸಿ ಈ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಇದೇ ರೀತಿ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಸ್ವಚ್ಛತಾ ಶ್ರಮದಾನವನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ನಡೆಸಬೇಕೆಂಬ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!