ಈಡನ್ ಗ್ಲೋಬಲ್ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ವಿನೂತನ ಪ್ರಯತ್ನ
ಪುತ್ತೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಎಷ್ಟು ಮುಖ್ಯವೋ ಆ ಶಿಕ್ಷಣಕ್ಕೆ ಅರ್ಹ ಉದ್ಯೋಗವೂ ಅಷ್ಟೇ ಮುಖ್ಯ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅತ್ಯುತ್ತಮ ಶಿಕ್ಷಣ ಮತ್ತು ಉದ್ಯೋಗ ಪಡೆಯಬೇಕಾದರೆ ಮಕ್ಕಳು ಸಿಇಟಿ, ನೀಟ್, ಯು.ಪಿ.ಎಸ್.ಸಿ,ಕೆ.ಪಿ.ಎಸ್.ಸಿ ಮತ್ತು ಬ್ಯಾಂಕಿಂಗ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತು ಸಂದರ್ಶನಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಆ ಪರೀಕ್ಷೆಗಳಿಗೆ ಉತ್ತಮ ತಯಾರಿ ಅತೀ ಮುಖ್ಯ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ಈಡನ್ ಗ್ಲೋಬಲ್ ಶಾಲೆಯು ಪ್ರತೀ ವರ್ಷ ಜೆನಿಯೋಡೆಲ್ಮೆಸ್ ಎಂಬ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ.
ಈ ಪರೀಕ್ಷೆಯು ಯು.ಪಿ.ಎಸ್.ಸಿ ಮಾದರಿ ಪ್ರಿಲಿಮಿನರಿ, ಮೈನ್ಸ್ ಮತ್ತು ಸಂದರ್ಶನ ಎಂಬ 3 ಹಂತಗಳಲ್ಲಿ ನಡೆಸಲಾಗುತ್ತದೆ. ಇದರ ಮುಖ್ಯ ಉದ್ದೇಶ ನಾಳೆಗಾಗಿ ಇಂದೇ ದುಡಿ ಎನ್ನುವ ಗಾದೆ ಮಾತಿನಂತೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಉತ್ತಮ ಸ್ಥಾನಕ್ಕೇರಲು ಒಂದು ಉತ್ತಮ ವೇದಿಕೆ ಮತ್ತು ತಯಾರಿಯನ್ನು ನಡೆಸಿ ಕೊಡುವುದಾಗಿದೆ.
ಈ ಪರೀಕ್ಷೆಯ ಪ್ರಥಮ ಹಂತ ಮುಗಿದಿದ್ದು 80 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆಗೊಂಡು ಮುಹಮ್ಮದ್ ಸುಹಾನ್ ಪ್ರಥಮ ರಾಂಕ್, ಮುಹಮ್ಮದ್ ಅಜೀಮ್ ದ್ವಿತೀಯ ರಾಂಕ್ ಮತ್ತು ನಾಸಿಂ ತೃತೀಯ ರಾಂಕ್ ಪಡೆದಿದ್ದಾರೆ. ಮಕ್ಕಳಿಂದ ಮತ್ತು ಹೆತ್ತವರಿಂದ ಒಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಶಾಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.