ಮಂಗಳೂರು: ಆಪದ್ಬಾಂಧವ ಆಸೀಫ್ ಬಂಧನ
ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬಂದಿ ಮೇಲೆ ಆಪದ್ಬಾಂಧವ ಆಸೀಫ್ ಅನುಚಿತ ವರ್ತನೆ ತೋರಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದ್ದು, ಪ್ರಕರಣದ ದಾಖಲಿಸಿದ ಪೊಲೀಸರು ಆಸಿಫ್ ಅವರನ್ನು ಬಂಧಿಸಿದ್ದಾರೆ.
ಬುಧವಾರ ಸಂಜೆ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು. ಹೊರಗಡೆ ಆಂಬುಲೆನ್ಸ್ ನಿಲ್ಲಿಸಿ ರೋಗಿಗಳನ್ನು ಒಳಗಡೆ ಕರೆದೊಯ್ದು ಅಡ್ಮಿಶನ್ ಮಾಡುತ್ತಿದ್ದಾಗ ಸೆಕ್ಯುರಿಟಿ ಗಾರ್ಡ್ ಸಿಬಂದಿ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದ್ದಾರೆ. ಆದರೆ ರೋಗಿಗಳನ್ನು ಅಡ್ಮಿಶನ್ ಮಾಡುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ.
ಸ್ವಲ್ಪ ಹೊತ್ತಾದರೂ ಆಂಬುಲೆನ್ಸ್ ತೆರವು ಮಾಡದ್ದಕ್ಕೆ ಮಹಿಳಾ ಸಿಬಂದಿ ವಾಹನ ತೆಗೆಯುವಂತೆ ಹೇಳಿದ್ದು, ಆಸಿಫ್ ಮತ್ತು ಮಹಿಳಾ ಸಿಬಂದಿ ನಡುವೆ ಮಾತಿಗೆ ಮಾತಾಗಿತ್ತು. ಈ ವೇಳೆ, ಸಿಬಂದಿಯನ್ನು ದೂಡಿ ಕೈಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಆಸ್ಪತ್ರೆ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಆಸಿಫ್ ಅವರನ್ನು ಕರೆದೊಯ್ದಿದ್ದಾರೆ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.