ಕರಾವಳಿ

ಸೌಜನ್ಯ ಹಂತಕರನ್ನು ಗಲ್ಲಿಗೇರಿಸಿ: ಸುಳ್ಯದಲ್ಲಿ ಘರ್ಜಿಸಿದ ಮಹೇಶ್ ಶೆಟ್ಟಿ ತಿಮರೋಡಿ



ಮಗಳನ್ನು ನೆನೆದು ಕಣ್ಣೀರು ಸುರಿಸಿದ ಸೌಜನ್ಯಾ ತಾಯಿ ಕುಸುಮಾವತಿ

ಸುಳ್ಯ: ಸೌಜನ್ಯ ಹತ್ಯೆಗೆ ನ್ಯಾಯ ಕೇಳಿ ಆ.8ರಂದು ಸುಳ್ಯದಲ್ಲಿ ಬೃಹತ್ ಜಾಥಾ, ಪ್ರತಿಭಟನಾ ಸಭೆ ನಡೆಯಿತು.

ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ಸೌಜನ್ಯ ಅತ್ಯಾಚಾರ, ಕೊಲೆ ನಡೆದು 11 ವರ್ಷ ಕಳೆದರೂ ಇದುವರೆಗೂ ನ್ಯಾಯ ಸಿಕ್ಕಿಲ್ಲ, ಇದೀಗ 11 ವರ್ಷದ ಮೇಲೆಯೂ ನ್ಯಾಯ ಸಿಕ್ಕಿಲ್ಲ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಎಂದು ಹೇಳಿದರು.

ನಿಜವಾಗಿಯೂ ನನಗೆ ನಾಚಿಕೆಯಾಗುತ್ತಿದೆ, ಮಹಿಳೆಯರನ್ನು ಮಾತೆ…ಮಾತೆ ಎನ್ನುತ್ತೇವೆ, ಆದರೆ ಆ ಮಾತೆಯ ರಕ್ಷಣೆ ನಮಗೆ ಆಗುತ್ತಿಲ್ಲ ಎಂದಾದರೆ ನಾವೇನು ಮಾಡಬೇಕು? ನಾವು ಯಾರಲ್ಲಿ ನ್ಯಾಯ ಕೇಳಬೇಕು. ಧರ್ಮಸ್ಥಳದಲ್ಲಿ ಎಷ್ಟು ಅತ್ಯಾಚಾರ ಪ್ರಕರಣ ನಡೆದಿದೆ? ಎಂದು ಪ್ರಶ್ನಿಸಿದ ಅವರು ಧರ್ಮಸ್ಥಳದ ಹೆಸರೆತ್ತಿದರೆ ನಿಮ್ಮ ಮಾನ ಹೋಗ್ತದಾ ಎಂದು ಪ್ರಶ್ನಿಸಿದರು.

ದೇವರ ಹೆಸರಲ್ಲಿ ಧಾರ್ಮಿಕ ಭಯೋತ್ಪಾದನೆ ಮಾಡಬೇಡಿ, ಇದು ಧರ್ಮದ ಮತ್ತು ಸತ್ಯದ ಹೋರಾಟ. 11 ವರ್ಷದ ಮೇಲೂ ಹೋರಾಟ ಮುಂದುವರಿದಿದೆ. ಹೋರಾಟ ಮಾಡುವವರ ವಿರುದ್ಧವೇ ಇಂದು ಅಪಪ್ರಚಾರ ನಡೆಯುತ್ತಿದೆ. ಇದು ಸಮಾಜಕ್ಕೆ ಗೊತ್ತಾಗಬೇಕು. ಸತ್ಯ ಹೊರಬರಬೇಕು, ನೈಜ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಅವರು ಹೇಳಿದರು.

ನಮ್ಮ ಹೋರಾಟ ದೇವಸ್ಥಾನದ ವಿರುದ್ಧವಲ್ಲ, ಧರ್ಮದ ವಿರುದ್ದವಲ್ಲ, ಜಾತಿಯ ವಿರುದ್ಧವಲ್ಲ, ನಮ್ಮದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದವರನ್ನು ಪತ್ತೆ ಹಚ್ಚಲು ಹೋರಾಟ ನಡೆಸುತ್ತಿದ್ದೇವೆ, ಅತ್ಯಾಚಾರಿಗಳು ಈ ಮಣ್ಣಿನಲ್ಲಿ ಬದುಕಬಾರದು ಎಂದು ಅವರು ಹೇಳಿದರು.

ಆರೋಪಿಗಳು ಯಾರೇ ಆಗಲಿ, ಎಷ್ಟೇ ಪ್ರಭಾವಶಾಲಿಯೇ ಆಗಲಿ ಅವರಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದ ತಿಮರೋಡಿ ಅವರು ನ್ಯಾಯ ಸಿಗುವರೆಗೂ ಹೋರಾಟ ಮುಂದುವರೆಯಲಿದೆ ಎಂದರು.

ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ ಮಗಳನ್ನು ನೆನೆದು ವೇದಿಕೆಯಲ್ಲಿ ಕಣ್ಣೀರು ಸುರಿಸಿದರು.

ಇದಕ್ಕೂ ಮೊದಲು ನಿಂತಿಕಲ್‌ನಿಂದ ಹೊರಟ ಪ್ರತಿಭಟನಾ ವಾಹನ ಜಾಥಾ ಸುಳ್ಯದ ವರೆಗೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!