ಕರಾವಳಿ

ಆಧಾರ್‌ ನೋಂದಣಿಗೆ ಅಂಚೆಕಚೇರಿಯಲ್ಲಿ ಫುಲ್ ರಶ್:
ಹೆಚ್ಚುವರಿ ಕೌಂಟರ್ ತೆರೆಯುವಂತೆ ಅಂಚೆ ಅಧಿಕಾರಿಗೆ ಶಾಸಕರ ಸೂಚನೆ




ಪುತ್ತೂರು: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡು ನೋಂದಣಿಗೆ ಕೆಲವೇ ಮಂದಿಗೆ ಮಾತ್ರ ದಿನದಲ್ಲಿ ಅವಕಾಶವಿರುವುದರಿಂದ ಜನಸಂದಣಿ ಹೆಚ್ಚಾಗುತ್ತಿದ್ದು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಆ. 8 ರಂದು ಶಾಸಕರು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.


ದಿನದಲ್ಲಿ 40 ಮಂದಿಗೆ ಮಾತ್ರ ಆಧಾರ್ ನೋಂದಣಿ ಅಥವಾ ತಿದ್ದುಪಡಿ ಗೆ ಅವಕಾಶವಿದ್ದು ಟೋಕನ್ ನೀಡಲಾಗುತ್ತಿದೆ. ಟೋಕನ್ ಪಡೆಯಲು ಸಾರ್ವಜನಿಕರು ಮುಂಜಾನೆಯೇ ಅಂಚೆ ಕಚೇರಿ ಬಳಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ನೂರಕ್ಕೂ ಮಿಕ್ಕಿ ಜನರು ಸರತಿ ಸಾಲಿನಲ್ಲಿ ನಿಂತರೆ ಅದರಲ್ಲಿ ಕೇವಲ 40 ಮಂದಿಗೆ ಮಾತ್ರ ಟೋಕನ್ ನೀಡಲಾಗುತ್ತಿದೆ. ದೂರದ ಊರುಗಳಿಂದ ಬರುವ ಸಾರ್ವಜನಿಕರು ಅನೇಕ ಬಾರಿ ಬಂದರೂ ಟೋಕನ್ ಸಿಗದೆ ಮರಳುವಂತಾಗಿದೆ. ಈ ಬಗ್ಗೆ ಶಾಸಕರಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅಂಚೆ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಹೆಚ್ಚುವರಿ ಕೌಂಟರ್ ತೆರೆಯಿರಿ
ಸದ್ಯ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿಗೆ ಅವಕಾಶ ಇರುವ ಕಾರಣ ರಶ್ ಆಗುತ್ತಿದೆ. ಈ ಹಿಂದೆ ಗ್ರಾಪಂ ಕಚೇರಿ , ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೋಂದಣಿಗೆ ಅವಕಾಶವಿತ್ತು ಆದರೆ ಅದೆಲ್ಲವನ್ನೂ ಈ ಹಿಂದಿನ ಸರಕಾರ ರದ್ದು ಮಾಡಿರುವ ಕಾರಣ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಶಾಸಕರಲ್ಲಿ ಹೇಳಿಕೊಂಡರು. ಸರಕಾರದ ಗ್ಯಾರಂಟಿ ಯೋಜನೆ ಅರ್ಜಿ ಹಾಕಲು ಇದೀಗ ಬಹುತೇಕ ಮಂದಿಗೆ ಆಧಾರ್ ತಿದ್ದುಪಡಿ ಅಥವಾ ಆಧಾರ್ ನೋಂದಣಿ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಅಂಚೆ ಕಚೇರಿಯಲ್ಲಿ ಜನಸಂದಣಿ ಜಾಸ್ತಿಯಾಗುತ್ತಿರುವುದರಿಂದ ಹೆಚ್ಚುವರಿ ಕೌಂಟರ್ ಆರಂಭಿಸಿ ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುವಂತೆ ಶಾಸಕರು ಹಿರಿಯ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಗೆ ಸೂಚನೆಯನ್ನು ನೀಡಿದ್ದಾರೆ.

ಸರಕಾರದ ಗಮನಕ್ಕೆ ತರುತ್ತೇನೆ
ಆಧಾರ್ ನೋಂದಣಿಗೆ ಗ್ರಾಮ ಒನ್ , ಸೇವಾ ಕೇಂದ್ರ ಮತ್ತು ಬ್ಯಾಂಕುಗಳಲ್ಲಿ ಈ ಹಿಂದೆ ಇದ್ದ ವ್ಯವಸ್ಥೆಯನ್ನು ಪುನರ್ ಆರಂಭ ಮಾಡುವಂತೆ ಸರಕಾರದ ಗಮನಕ್ಕೆ ತರುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು. ಒಂದೇ ಕಡೆ ಮಾತ್ರ ಈ ವ್ಯವಸ್ಥೆ ಇದ್ದಲ್ಲಿ ಜನರಿಗೆ ಸಮಸ್ಯೆಯಾಗುತ್ತದೆ. ಸರಕಾರದ ಗಮನಕ್ಕೆ ತಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಶಾಸಕರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!