ಕುಂಬ್ರಕ್ಕೆ ಪದವಿ ಕಾಲೇಜು ಕೊಡಿ: ಕುಂಬ್ರ ವರ್ತಕರ ಸಂಘದ ಅಧ್ಯಕ್ಷರಿಂದ ಶಾಸಕರಿಗೆ ಮನವಿ
ಪುತ್ತೂರು: ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಅತೀ ಅವಶ್ಯಕವಾಗಿರುವ ಪದವಿ ಕಾಲೇಜನ್ನು ಮಂಜೂರು ಮಾಡುವಂತೆ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ ರಾಯ ಅವರು ವರ್ತಕರ ಸಂಘದ ಪರವಾಗಿ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಆ.6ರಂದು ಕುಂಬ್ರದಲ್ಲಿ ನಡೆದ ವರ್ತಕರ ಸಂಘದ ‘ಸ್ನೇಹ ಸಂಜೆ’ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.
ಸುಳ್ಯ, ಬೆಳ್ಳಾರೆ, ಪಾಣಾಜೆ, ಪುತ್ತೂರು ಈ ಪ್ರದೇಶದ ಹೃದಯಭಾಗದಲ್ಲಿರುವ ಕುಂಬ್ರಕ್ಕೆ ಡಿಗ್ರಿ ಕಾಲೇಜಿನ ಅವಶ್ಯಕತೆ ಇದೆ, ಹತ್ತಿರದಲ್ಲಿ ಎಲ್ಲಿಯೂ ಪದವಿ ಕಾಲೇಜು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಪಿಯುಸಿಯಲ್ಲೇ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಕುಂಬ್ರದಲ್ಲಿ ಪದವಿ ಕಾಲೇಜು ಮಾಡಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ವರ್ತಕರ ಸಂಘದ ಮನವಿಯಲ್ಲಿ ತಿಳಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಕುಂಬ್ರಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.