ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಘೋಷಿಸಿದ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್
ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ಈ ಚಿತ್ರವು ದೀರ್ಘಕಾಲದವರೆಗೆ ನಮ್ಮನ್ನು ಕಾಡಲಿದೆ. ಈ ದುಃಖದ ಸಮಯದಲ್ಲಿ, ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಬಲ್ಲೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳಿಗೆ ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಬೋರ್ಡಿಂಗ್ನಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತೇನೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.
ಸೆಹ್ವಾಗ್ ಈ ರೀತಿಯಾಗಿ ಮಾನವೀಯತೆ ಮರೆಯುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಇಬ್ಬರು ಸೈನಿಕರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಹರಿಯಾಣದ ತಮ್ಮ ಶಾಲೆಯಲ್ಲಿ ಆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರಿಕೆಟ್ ತರಬೇತಿಯನ್ನೂ ಸಹ ನೀಡುತ್ತಿದ್ದಾರೆ.
ವೀರೇಂದ್ರ ಸೆಹ್ವಾಗ್ ಅವರ ಈ ಮಾನವೀಯ ನಡೆಗೆ ಇದೀಗ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಮಕ್ಕಳ ಶಿಕ್ಷಣದ ಮೇಲೆ ಟೀಮ್ ಇಂಡಿಯಾ ಮಾಜಿ ಅಟಗಾರನಿಗಿರುವ ಕಾಳಜಿಯನ್ನು ಹಲವರು ಪ್ರಶಂಸಿದ್ದಾರೆ.
ಒಡಿಶಾ ರೈಲು ದುರಂತದಲ್ಲಿ 275 ಮಂದಿ ಸಾವನ್ನಪ್ಪಿದ್ದರೆ, 1,175 ಮಂದಿ ಗಾಯಗೊಂಡಿದ್ದಾರೆ.