ಪುತ್ತೂರು ಜೆಡಿಎಸ್‌ನಲ್ಲೀಗ ರಾಜೀನಾಮೆ ಪರ್ವ: ಒಗ್ಗಟ್ಟು ಪ್ರದರ್ಶಿಸಿಯೂ ಕನಿಷ್ಠ ಮತ ಪಡೆದ ಜೆಡಿಎಸ್
ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು ಇಬ್ಬರು ನಾಯಕರು ತಮ್ಮ ಹುದ್ದೆಗೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.
ಪುತ್ತೂರು ತಾಲೂಕು ಜನತಾ ದಳದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ಲಾ ಕೆದುವಡ್ಕ ರಾಜೀನಾಮೆ ನೀಡಿದ್ದು ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ನೊಂದು ತನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅವರು ರಾಜ್ಯಾಧ್ಯಕ್ಷರಿಗೆ ಸಲ್ಲಿಸಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಜೆಡಿಎಸ್ ಸೇರ್ಪಡೆಯಾಗಿದ್ದ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರು ಸ್ಪರ್ಧಿಸಿದ್ದರು. ಪ್ರಾರಂಭದಲ್ಲಿ ದಿವ್ಯಪ್ರಭಾ ಅವರಿಗೆ ಟಿಕೆಟ್ ನೀಡಿರುವ ವಿಚಾರದಲ್ಲಿ ಅಸಾಮಾಧಾನ ಹೊಂದಿದ್ದ ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ತಮಗೆ ಅವಕಾಶ ಸಿಗದ ಕಾರಣಕ್ಕೆ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ಬಳಿಕ ಮಾತುಕತೆ ನಡೆದು ಅಶ್ರಫ್ ಕಲ್ಲೇಗ ನಾಮಪತ್ರ ವಾಪಸ್ ಪಡೆದಿದ್ದು ಬಳಿಕ ದಿವ್ಯಪ್ರಭಾ ಗೌಡ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಪ್ರಚಾರ ಕಾರ್ಯವನ್ನೂ ನಡೆಸಿದ್ದರು. ಆದರೆ ಚುನಾವಣಾ ಫಲಿತಾಂಶ ದಿನ ಜೆಡಿಎಸ್‌ಗೆ ಶಾಕ್ ನೀಡಿತ್ತು. ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಅವರು ಕೇವಲ 684 ಮತಗಳನ್ನಷ್ಟೇ ಗಳಿಸಿಕೊಂಡಿದ್ದರು.
ಒಗ್ಗಟ್ಟು ಪ್ರದರ್ಶಿಸಿಯೂ ಕನಿಷ್ಠ ಮತ ಪಡೆದುಕೊಂಡಿರುವ ಜೆಡಿಎಸ್ ಬಗ್ಗೆ ತಾಲೂಕಿನಲ್ಲಿ ಚರ್ಚೆಯೂ ನಡೆದಿತ್ತು. ಈ ಹಿಂದೆಂದಿಗಿಂತಲೂ ಕನಿಷ್ಠ ಮತವನ್ನು ಜೆಡಿಎಸ್ ಪಡೆಯಲು ಏನು ಕಾರಣ ಎಂಬಿತ್ಯಾದಿ ವಿಚಾರಗಳ ಬಗ್ಗೆ ಜಾಲತಾಣಗಳಲ್ಲೂ ಚರ್ಚೆ ನಡೆದಿತ್ತು.
ಇದೀಗ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಾಗಿದೆ. ಇಬ್ಬರು ನಾಯಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಇನ್ನಷ್ಟು ಮಂದಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಅದು ಖಚಿತಗೊಂಡಿಲ್ಲ.