ಉಪ್ಪಿನಂಗಡಿ: ಕರಾಯದಲ್ಲಿ 1 ತಿಂಗಳ ಹಸುಕೂಸು ಸಹಿತ ಮಕ್ಕಳಿಬ್ಬರನ್ನು ಬಿಟ್ಟು ಹೋಗಿದ್ದ ಹೆತ್ತವರು ಇನ್ನೂ ನಾಪತ್ತೆ
ಪುತ್ತೂರು: ಉಪ್ಪಿನಂಗಡಿ ಸಮೀಪದ ಕರಾಯದ ಮನೆಯೊಂದರಲ್ಲಿ 1ತಿಂಗಳ ಹಸುಕೂಸನ್ನು ಬಿಟ್ಟು ಹೋಗಿರುವ ಹೆತ್ತವರು ಇನ್ನೂ ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದ್ದು ಹಸುಗೂಸು ಸಹಿತ ಮಕ್ಕಳಿಬ್ಬರು ಆಶ್ರಮದಲ್ಲಿದ್ದಾರೆ.

ಕರಾಯ ಪರಿಸರ ವ್ಯಾಪ್ತಿಯಲ್ಲಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದ ದಂಪತಿ ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ಸಾಗಿಸುತ್ತಿದ್ದು ದಂಪತಿಗೆ ನಾಲ್ಕು ವರ್ಷದ ಮಗನೋರ್ವನಿದ್ದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದು ಜನಿಸಿತ್ತು. ತಮ್ಮ ಎರಡೂ ಮಕ್ಕಳನ್ನು ಜೂ.2ರಂದು ಕರಾಯದ ಫಾತಿಮಾ ಎಂಬವರ ಮನೆಯಲ್ಲಿ ಬಿಟ್ಟು ನಾವು ಮಂಗಳೂರಿಗೆ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದವರು ಬಳಿಕ ಮನೆಗೆ ವಾಪಸ್ ಬರದೇ ನಾಪತ್ತೆಯಾಗಿದ್ದಾರೆ.
ಇಬ್ಬರು ಮಕ್ಕಳ ಲಾಲನೆ ಮಾಡಿದ ಫಾತಿಮಾರವರು 2 ದಿನ ಕಳೆದರೂ ಹೆತ್ತವರು ಮರಳಿ ಬಾರದಿದ್ದಾಗ ಆತಂಕಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಜೂ.4ರಂದು ಮಕ್ಕಳನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಿ ಪೊಲೀಸರಿಗೆ ದೂರು ನೀಡಿದ್ದರು.





