ಉಪ್ಪಿನಂಗಡಿ ವಿವಾ ಫ್ಯಾಷನ್ ಬಟ್ಟೆ ಮಳಿಗೆಯಲ್ಲಿ ಅಗ್ನಿ ಅವಘಡ: ಅಂದಾಜು 3 ಕೋಟಿ ರೂ ನಷ್ಟ
ಉಪ್ಪಿನಂಗಡಿಯಲ್ಲಿ ಎ.4ರಂದು ವಿವಾ ಫ್ಯಾಷನ್ ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ರೂ 3 ಕೋಟಿ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬೆಳಗ್ಗೆ ಸುಮಾರು 7:30ರಷ್ಟರ ಹೊತ್ತಿಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಬೆಂಕಿ ಸಂಪೂರ್ಣ ನಂದುವಷ್ಟರ ಹೊತ್ತಿಗೆ ಒಂದನೇ ಮಳಿಗೆಯ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು. ಎರಡನೇ ಮಹಡಿಗೆ ಬೆಂಕಿ ವ್ಯಾಪಿಸಿಲ್ಲವಾದರೂ, ಅಲ್ಲಿ ಸಂಪೂರ್ಣ ಕಪ್ಪು ಹೊಗೆ ತುಂಬಿಕೊಂಡಿದ್ದರಿಂದ ಅಲ್ಲಿದ್ದ ಬಟ್ಟೆ-ಬರೆಗಳ ದಾಸ್ತಾನು ಉಪಯೋಗಕ್ಕೆ ಬಾರದಂತೆ ಆಗಿವೆ.
ಮುಂಬರುವ ರಂಜಾನ್ ಹಬ್ಬಕ್ಕೆಂದು ಬಟ್ಟೆಯ ಸ್ಟಾಕ್‌ಗಳನ್ನು ಖರೀದಿಸಿ ಅದರ ಬಂಡಲ್‌ಗಳನ್ನು ಒಂದನೇ ಮಹಡಿಯಲ್ಲಿಡಲಾಗಿತ್ತು. ಅದೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿವೆ. ಒಂದನೇ ಮಹಡಿಯಲ್ಲಿದ್ದ ಪೀಠೋಪಕರಣ, ಎಸಿ, ವಯರಿಂಗ್, ಕಂಪ್ಯೂಟರ್‌ಗಳು, ಬಟ್ಟೆ ಬರೆ ಸೇರಿದಂತೆ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಘಟನೆಯಿಂದ ಸುಮಾರು 3 ಕೋಟಿಯಷ್ಟು ನಷ್ಟ ಸಂಭವಿಸಿರಬಹುದು. ಒಮ್ಮಿಂದೊಮ್ಮೆಲೇ ವಿದ್ಯುತ್ ಲೈನ್‌ನಲ್ಲಿ ಹೈ ವೋಲ್ವೇ ಬಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ‘ವಿವಾ ಫ್ಯಾಶನ್’ನ ಮಾಲಕ ಇಮ್ಮಿಯಾಝ್ ತಿಳಿಸಿದ್ದಾರೆ.