ಬಂಟ್ವಾಳ: ಅಡಿಕೆ ಕಳವುಗೈದ ಆರೋಪಿಯ ಬಂಧನ
ಬಂಟ್ವಾಳ: ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವುಗೈದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಬಾಳ್ತಿಲ ಗ್ರಾಮದ ಕಸೆಕೋಡಿಯ ಮಂಜುನಾಥ ನಾಗರಾಜ್ ಭೋವಿ ಬಂಧಿತ ಆರೋಪಿ. ಕಳವು ಮಾಡಿದ 105 ಕೆ.ಜಿ. ಅಡಿಕೆ, ಕಳವು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಹಾಗೂ ನಗದನ್ನು ಆರೋಪಿಯಿಂದ ವಶಪಡಿಸಲಾಗಿದೆ.
ಐವನ್ ತೋರಸ್ ಎಂಬುವವರು ತಮ್ಮ ಅಡಿಕೆ ತೋಟದ ಮಧ್ಯದಲ್ಲಿರುವ ಅಂಗಳದಲ್ಲಿ ಅಡಿಕೆಯನ್ನು ಒಣಗಲು ಹಾಕಿದ್ದರು. ಆದರೆ ಡಿ.24ರ ಸಂಜೆ 6 ಗಂಟೆಯ ನಂತರ ಡಿ.29ರ ಸಂಜೆ 6.30ರ ಒಳಗೆ 100-120 ಕೆ.ಜಿ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದರು. ಈ ಬಗ್ಗೆ ಡಿ.30ರಂದು ಐವನ್ ತೋರಸ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ತಲಾಷೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಮಂಗಳೂರು ನಗರದ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.