ಸಚಿವ ಅರಗ ಜ್ಞಾನೇಂದ್ರರ ‘ಅಡಿಕೆ ಬೆಳೆಗೆ ಭವಿಷ್ಯವಿಲ್ಲ’ ಹೇಳಿಕೆಗೆ ಯೂತ್ ಕಾಂಗ್ರೆಸ್ ಖಂಡನೆ
ಈಗಾಗಲೇ ಅಡಿಕೆ ಕೃಷಿಕರು ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರು ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎಂಬ ಹೇಳಿಕೆ ನೀಡಿದ್ದು ಇದನ್ನು ಯೂತ್ ಕಾಂಗ್ರೆಸ್ ಖಂಡಿಸುತ್ತದೆ ಎಂದು ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ಹೇಳಿದ್ದಾರೆ.
ಅಲ್ಲದೆ ಈ ರೀತಿಯ ಹೇಳಿಕೆಯನ್ನು ನೀಡಿರುವಂತಹ ಸಚಿವರು ಅಡಿಕೆ ಕೃಷಿಕರಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಯೂತ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಡಿ.30 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಯ ಕೃಷಿಕರು ಅಡಿಕೆ ಬೆಳೆಯನ್ನು ಬೆಳೆದು ಪ್ರಧಾನ ವಾಣಿಜ್ಯ ಬೆಳೆಯನ್ನಾಗಿ ಮಾಡಿಕೊಂಡಿದ್ದಾರೆ. ಅಡಿಕೆ ಬೆಳೆದರೇನೇ ಜೀವನ ನಿರ್ವಹಣೆಗೆ ಸಾಧ್ಯ ಎನ್ನುವ ಸ್ಥಿತಿಯಲ್ಲಿ ಕೃಷಿಕರು ಇದ್ದಾರೆ. ಹೀಗಿರುವಾಗ ಸರಕಾರದ ಪ್ರತಿನಿಧಿಯಾಗಿ, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರರು ಅಡಿಕೆ ಕೃಷಿಗೆ ಭವಿಷ್ಯವಿಲ್ಲ. ಪ್ರೋತ್ಸಾಹ ಕೊಡಬಾರದು, ಅಡಿಕೆ ಹೆಚ್ಚು ಬೆಳೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳುವ ಮೂಲಕ ಕೃಷಿಕರ ಆತ್ಮಸ್ಥೈರ್ಯ ಕುಗ್ಗಿಸಲು ಮುಂದಾಗಿರುವುದು ವಿಪರ್ಯಾಸ ಎಂದು ಹೇಳಿದರು.
ಗೃಹ ಸಚಿವರು ಕೂಡಲೆ ಕೃಷಿಕರಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಹೇಳಿದರು.
ಅಡಿಕೆ ಎಲೆ ಹಳದಿ ರೋಗಕ್ಕೆ ಸರಕಾರ ಯಾವುದೇ ಪರಿಹಾರ ಇಲ್ಲಿಯವರೆಗೆ ಕೃಷಿಕರಿಗೆ ಸಿಕ್ಕಿಲ್ಲ. ಆದ್ದರಿಂದ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಕೆಲಸವನ್ನು ವಿಪಕ್ಷವಾಗಿ ಕಾಂಗ್ರೆಸ್ ಮಾಡಿದೆ. ಈಗಾಗಲೇ ಅಡಿಕೆ ಗಿಡಗಳ ರೋಗದಿಂದ ಸಂಕಷ್ಟಕ್ಕೀಡಾದ ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಂಪಾಜೆಯಿಂದ ಮಂಗಳೂರು ತನಕ ಪಾದಯಾತ್ರೆ ಕೈಗೊಳ್ಳುವುದಾಗಿ ಅವರು ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ. ಮಾತನಾಡಿ, ಗೃಹ ಸಚಿವರಾಗಿ ಅಡಿಕೆ ಕೃಷಿಯ ಬಗ್ಗೆ ಈ ರೀತಿಯ ಬಾಲಿಶವಾದ ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಭಯ ಉಂಟಾಗಿದೆ. ಒಬ್ಬ ಸಚಿವರಾಗಿ ಕೃಷಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೇ ವಿನಹ ನೋವಿನ ಸಂದರ್ಭದಲ್ಲಿ ರೈತರ ಮನಸ್ಸನ್ನು ಇನ್ನೂ ಹೆಚ್ಚಿಗೆ ನೋಯಿಸುವುದು ಸರಿಯಲ್ಲ ಎಂದು ಹೇಳಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾತನಾಡಿ ನಮ್ಮ ದೇಶಕ್ಕೆ ಹೊರದೇಶದಿಂದ ಬರುತ್ತಿರುವ ಅಡಿಕೆ ಆಮದನ್ನು ಮೊದಲು ಸರಕಾರ ನಿಲ್ಲಿಸಲಿ. ಆಗ ಈ ಭಾಗದ ಅಡಿಕೆಗೆ ಮತ್ತಷ್ಟು ಉತ್ತಮ ಬೆಲೆ ಬರುತ್ತದೆ.
ಸದನದಲ್ಲಿ ಇನ್ನೋರ್ವ ಸಚಿವರು ಇದರ ಬಗ್ಗೆ ಮಾತನಾಡುವಾಗ ಗೃಹ ಸಚಿವರು ಮೌನವಾಗಿದ್ದರು. ಅದರ ಅರ್ಥ ‘ಅಡಿಕೆ ಆಮದು ಮಾಡುವವರಿಂದ ಇವರು ಕಮಿಷನ್ ಪಡೆದಿದ್ದಾರೆಂಬ ಸಂಶಯ ಮೂಡುತ್ತಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ
ನ.ಪಂ. ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.