ಕರಾವಳಿ

ಸುಳ್ಯದಲ್ಲೊಂದು ಅಪಾಯಕಾರಿ ತೂಗು ಸೇತುವೆ: ತುಕ್ಕು ಹಿಡಿದು ಸಂಪೂರ್ಣವಾಗಿ ತುಂಡಾದ ಸೇತುವೆಯ ತಡೆ ಬೇಲಿಗಳು



✍️ ಹಸೈನಾರ್ ಜಯನಗರ

‘ಇತ್ತೀಚೆಗೆ ಗುಜರಾತಿನ ಮೊರ್ಬಿಯಲ್ಲಿ ನದಿಯಲ್ಲಿ ಅಳವಡಿಸಿದ್ದ ತೂಗು ಸೇತುವೆ ದುರಂತದಿಂದ 130ಕ್ಕೂ ಹೆಚ್ಚು ಮಂದಿ ಜೀವ ವನ್ನು ಕಳೆದುಕೊಂಡು, ನೂರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಾಳುಗಳಾದ ಘಟನೆ ಎಲ್ಲರಿಗೂ ತಿಳಿದಿರುವ ವಿಚಾರ.
ಸಾರ್ವಜನಿಕ ಸೌಲಭ್ಯಕ್ಕಾಗಿ ಅಥವಾ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರಕಾರಗಳು ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಅದನ್ನು ಕಾರ್ಯರೂಪಕ್ಕೆ ತರುತ್ತದೆ.
ಆದರೆ ಅದರ ನಿರ್ಮಾಣದ ಬಳಿಕ ಅದರ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದಿದ್ದಲ್ಲಿ ಅವುಗಳಿಂದ ಹಲವಾರು ರೀತಿಯ ತೊಂದರೆಗಳು ಕೂಡ ಉಂಟಾಗಿ ಈ ರೀತಿಯ ಜೀವ ಹಾನಿ ಘಟನೆಗಳಿಗೆ ಸಾಕ್ಷಿಯಾಗುತ್ತದೆ.

ಸುಳ್ಯದಲ್ಲಿ ಅದೇ ರೀತಿಯ ಒಂದು ಅಪಾಯಕಾರಿ ದೃಶ್ಯ ಮುಂದೆ ಉಂಟಾಗಬಲ್ಲ ಅನಾಹುತವನ್ನು ಸ್ಥಳೀಯರಿಗೆ ಎಚ್ಚರಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ನಗರ ವ್ಯಾಪ್ತಿಗೆ ಒಳಪಡುವ ಒಡಬಾಯಿ ಪರಿಸರದಲ್ಲಿ ಸುಂದರವಾದ ತೂಗು ಸೇತುವೆಯ ತುದಿಯಿಂದಲೇ ಇದರ ತಡೆ ಬೇಲಿಗಳು ತುಕ್ಕು ಹಿಡಿದು ಅಲ್ಪ ಅಲ್ಪವಾಗಿ ಬಿದ್ದು ಹೋಗಿ ಇದೀಗ ಸಂಪೂರ್ಣವಾಗಿ ಬೇಲಿಯೇ ಮಾಯವಾಗಿದೆ.

2006 ರಲ್ಲಿ ಅಂದಿನ ರೋಟರಿ ಕ್ಲಬ್ ಸುಳ್ಯ ಇದರ ನೇತೃತ್ವದಲ್ಲಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸುಳ್ಯ ನಗರದಿಂದ ದೊಡ್ಡೇರಿ ಗ್ರಾಮಕ್ಕೆ ಸಂಚಾರ ಕಲ್ಪಿಸುವ ಉದ್ದೇಶದಿಂದ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಸುಂದರ ಮತ್ತು ಬೃಹತ್ ತೂಗು ಸೇತುವೆಯ ಸಾಲಿಗೆ ಸೇರಿದ ಈ ಸೇತುವೆಯು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಮಾರ್ಪಟ್ಟಿತು.


ದಿನದಲ್ಲಿ ಈ ಸೇತುವೆಯ ಮೂಲಕ ನೂರಾರು ಮಂದಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದರ ಮೇಲೆ ನಡೆದಾಡುತ್ತಿರುತ್ತಾರೆ. ಅಲ್ಲದೆ ಬೇರೆ ಬೇರೆ ಕಡೆಗಳಿಂದ ಬರುವಂತಹ ಪ್ರವಾಸಿಗರು ಈ ಸೇತುವೆಯ ಮೇಲೆ ನಿಂತು ಸುತ್ತಲಿನ ಸುಂದರ ಪರಿಸರದ ಸೌಂದರ್ಯವನ್ನು ನೋಡಿ ಕಣ್ತುಂಬಿ ಕೊಳ್ಳುತ್ತಾರೆ.


ಇದೀಗ ಸೇತುವೆಗೆ ಅಳವಡಿಸಿರುವ ತಡೆ ಬೇಲಿಗಳು ಸೇತುವೆಯ ತುದಿಯಿಂದಲೇ ತುಕ್ಕು ಹಿಡಿದು ಕಳಚಿ ಹೋಗಲು ಆರಂಭಿಸಿ ವರ್ಷಗಳೇ ಕಳೆಯ ತೊಡಗಿದೆ. ಈ ಸೇತುವೆಯಲ್ಲಿ ನಡೆದಾಡುವ ಮಂದಿಯ ಕಾಲುಗಳು ಆಯತಪ್ಪಿದರೆ ಕೆಳಗೆ ಕಾಣುವ ಪೊದೆಯೊಳಗೆ ಬೀಳುವುದಂತೂ ನಿಶ್ಚಿತ. ಅಲ್ಲದೆ ಸುಮಾರು 20 ಅಡಿಗೂ ಹೆಚ್ಚು ಎತ್ತರವಿರುವ ಈ ಸ್ಥಳದಿಂದ ಕೆಳಗೆ ಬಿದ್ದರೆ ಜನರು ಪ್ರಾಣವನ್ನು ಕಳೆದುಕೊಳ್ಳುವಂತೆ ಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಹೆಚ್ಚಿನದಾಗಿ ಪುಟ್ಟ ಮಕ್ಕಳು ಈ ಸೇತುವೆಯನ್ನು ವೀಕ್ಷಿಸಲು ಬರುವಾಗ ತುಂಬಾ ಎಚ್ಚರಿಕೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಒಮ್ಮೆಲೆ ಮಕ್ಕಳ ಹಿಂಡು ಸೇತುವೆಯನ್ನು ಹತ್ತಿ ಬರುವಾಗ ಅಪಾಯ ಕಟ್ಟಿಟ್ಟ ಬುತ್ತಿ. ಸೇತುವೆಯ ಆರಂಭದಿಂದ ಸುಮಾರು 50 ಅಡಿಗಳಷ್ಟು ಉದ್ದಕ್ಕೆ ಸೇತುವೆಯ ಎರಡು ಭಾಗಗಳಲ್ಲಿ ತಡೆ ಬೇಲಿ ಮುರಿದು ಹೋಗಿದ್ದು ಈ ಘಟನೆಯ ಕುರಿತು ಮಾಧ್ಯಮಗಳಲ್ಲಿ ಎಷ್ಟೇ ವರದಿ ಮಾಡಿದರು, ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು ಇತ್ತ ಗಮನ ಹರಿಸದೆ ಇರುವುದು ವಿಪರ್ಯಾಸವಾಗಿದೆ.
ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರ ಮನಸ್ಸಿನಲ್ಲಿ ಇಷ್ಟು ಚಂದದ ಸೇತುವೆಯ ನಿರ್ವಹಣೆಯನ್ನು ಮಾಡುವವರು ಯಾರು ಇಲ್ಲವೇ ಎಂಬ ಪ್ರಶ್ನೆ ಎಷ್ಟೋ ಮಂದಿಯಲ್ಲಿ ಬಂದಿರಬಹುದು.


ಅನಾಹುತಗಳು ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಅನಾಹುತಗಳು ಉಂಟಾಗದಂತೆ ತಡೆಯುವುದೇ ಸಂಬಂಧಪಟ್ಟ ಇಲಾಖೆಯವರ ಜವಾಬ್ದಾರಿಯಾಗಿದೆ.
ಆದಷ್ಟು ಶೀಘ್ರದಲ್ಲಿ ಇತ್ತ ಗಮನ ಹರಿಸಿ ಸಂಘ ಸಂಸ್ಥೆಗಳು ಸಾರ್ವಜನಿಕರು ಶ್ರಮಿಸಿ ನಿರ್ಮಿಸಿದ ಈ ಸುಂದರ ಸ್ಥಾವರವನ್ನು ಕಾಪಾಡಿಕೊಳ್ಳುವುದು ಮತ್ತು ಮುಂದೆ ಉಂಟಾಗಬಲ್ಲ ಅನಾಹುತವನ್ನು ತಪ್ಪಿಸುವ ಕಾರ್ಯ ಆಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!