ದಿವ್ಯಪ್ರಭಾ ಗೌಡರಲ್ಲಿ ಬಡವರ ಪರವಾದ ಕಾಳಜಿ ಇದೆ-ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ
ಪುತ್ತೂರು: ದಿವ್ಯಪ್ರಭಾ ಗೌಡ ಅವರಲ್ಲಿ ಬಡವರ ಪರವಾದ ಕಾಳಜಿ ಇದೆ. ಬಡವರ ಪರವಾಗಿ ಕೆಲಸ ಮಾಡುತ್ತಾ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹೇಳಿದರು.
ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ಗಾಂಧಿಕಟ್ಟೆಯಲ್ಲಿ ನ.1ರಂದು ನಡೆದ ಹಿರಿಯ ರಿಕ್ಷಾ ಚಾಲಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರಿಗೆ, ಅಶಕ್ತರಿಗೆ, ನೊಂದವರಿಗೆ ಸಹಾಯ ಮಾಡಬೇಕೆಂದು ಎಲ್ಲ ಧರ್ಮಗಳು ಹೇಳುತ್ತದೆ. ಆದರೆ ಅದನ್ನು ಪಾಲಿಸುವವರು ಮಾತ್ರ ಕಡಿಮೆ. ಈಗ ಏನಿದ್ದರೂ ಸ್ವಂತದ್ದರ ಬಗ್ಗೆ ಚಿಂತೆ ಮಾತ್ರ. ಕಷ್ಟದಲ್ಲಿರುವರಿಗೆ ಸಹಾಯ ಮಾಡುವವರು ಕಡಿಮೆ. 500 ರೂಪಾಯಿ ಸಹಾಯ ಮಾಡಿದರೆ ಅದನ್ನು ಪೇಪರಲ್ಲಿ ದೊಡ್ಡದಾಗಿ ಪ್ರಚಾರ ಮಾಡುವವರೂ ಇದ್ದಾರೆ ಎಂದ ಜಗದೀಶ್ ಶೆಟ್ಟಿಯವರು ಆಟೋ ಚಾಲಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ದಿವ್ಯ ಪ್ರಭಾ ನೇತೃತ್ವದ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕಿ ದಿವ್ಯಪ್ರಭಾ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್, ಆಟೋ ರಿಕ್ಷಾ ಚಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್, ಆಟೋ ಚಾಲಕ ಸತೀಶ್ ಪ್ರಭು ಮಾತನಾಡಿದರು.
ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮಾಧವ ಗೌಡ, ಮೋಹನ ಗುರ್ಜಿನಡ್ಕ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಬೊಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಶ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.