ಕಾಣಿಯೂರು ಗುಂಪು ಹಲ್ಲೆ ಮಾನವೀಯತೆಯ ಕಗ್ಗೊಲೆ-ಅನೀಸ್ ಕೌಸರಿ
ಪುತ್ತೂರು:ಜಿಲ್ಲೆಯ ಕೋಮುವಾದಿ ಶಕ್ತಿಗಳ ಮನುಷ್ಯತ್ವ ವಿರೋಧೀ ನಡೆಯಿಂದ ದೇಶವೇ ತಲೆ ತಗ್ಗಿಸುವಂತೆ ಆಗಿದ್ದು ಜಿಲ್ಲೆಗೆ ಮುಖ್ಯಮಂತ್ರಿಗಳು ಬಂದು ಹೋದ ಬಳಿಕ ಅಶಾಂತಿ ಹೆಚ್ಚುತ್ತಿದೆ. ಪರಸ್ಪರ ಧರ್ಮ ನೋಡಿ ಹಲ್ಲೆಗಳು ನಡೆಯುತ್ತಿದೆ ಇದಕ್ಕೆ ಮುಖ್ಯಮಂತ್ರಿಗಳ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯೇ ಕಾರಣವಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಹೇಳಿದರು.
ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಬ್ಬರ ಮೇಲೆ ಅಮಾನುಷ ಗುಂಪು ಹಲ್ಲೆ ನಡೆಸಿದರ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಆಶ್ರಯದಲ್ಲಿ ಅ.28ರಂದು ಸಂಜೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮುಸ್ಲಿಮರಿಗೊಂದು ನ್ಯಾಯ ಹಿಂದುಗಳಿಗೊಂದು ನ್ಯಾಯ ನೀಡುವ ಮೂಲಕ ಸಹೋದರರಂತೆ ಬಾಳುತ್ತಿದ್ದ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಸರಕಾರವೇ ಮಾಡುತ್ತಿದೆ. ಕಾಣಿಯೂರಿನಲ್ಲಿ ನಡೆದ ಗುಂಪು ಹಲ್ಲೆ ಕೃತ್ಯ ಮಾನವೀಯತೆಯ ಕಗ್ಗೊಲೆಯಾಗಿದೆ. ಈ ಪ್ರತಿಭಟನೆ ಆರಂಭಿಕ ಹಂತವಾಗಿದ್ದು ನ್ಯಾಯ ಸಿಗದಿದ್ದಲ್ಲಿ ಇನ್ನೊಂದು ಹಂತದಲ್ಲಿ ಯಾವ ರೀತಿಯ ಹೋರಾಟ ಮಾಡಬೇಕೆನ್ನುವುದು ನಮಗೆ ಗೊತ್ತಿದೆ ಎಂದು ಅವರು ಹೇಳಿದರು.
ಕಾಣಿಯೂರಿನಂತಹ ಹಲ್ಲೆ ಘಟನೆ ವಿರುದ್ಧ ಹಿಂದೂ ಸಮಾಜದ ಧರ್ಮಗುರುಗಳು ಧ್ವನಿ ಎತ್ತಬೇಕಾಗಿದ್ದು ನಮ್ಮ ಸಮುದಾಯದವರು ಆ ರೀತಿಯ ಕೃತ್ಯ ಎಲ್ಲಿಯಾದರೂ ಮಾಡಿದ್ದಲ್ಲಿ ಸಾವಿರಾರು ಉಲಮಾಗಳು ಅದರ ವಿರುದ್ಧ ಮಾತನಾಡುತ್ತಿದ್ದರು ಎಂದ ಅನೀಸ್ ಕೌಸರಿಯವರು ರಾಜ್ಯದ ಪತ್ರಿಕಾ ಮಾಧ್ಯಮಗಳೂ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ. ಕೋಮು ವಿಷಬೀಜ ಬಿತ್ತುವವರ ಮೇಲೆ ಪೊಲೀಸರು ಯಾಕೆ ಕೇಸು ದಾಖಲಿಸುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.