ಕಾಣಿಯೂರು ಗುಂಪು ಹಲ್ಲೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ವ್ಯಾಪಾರಿಗಳನ್ನು ಭೇಟಿ ಮಾಡಿದ ಶಕುಂತಲಾ ಶೆಟ್ಟಿ
ಪುತ್ತೂರು: ಕಾಣಿಯೂರಿನಲ್ಲಿ ಬೆಡ್‌ಶೀಟ್ ವ್ಯಾಪಾರಿಗಳಿಬ್ಬರ ಮೇಲೆ ಮಾರಣಾಂತಿಕಕವಾಗಿ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿಗಳ ಕೃತ್ಯವನ್ನು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಖಂಡಿಸಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಮಾರಣಾಂತಿಕ ಹಲ್ಲೆಗೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರಮೀಝುದ್ದೀನ್ ಮತ್ತು ರಫೀಕ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶಕುಂತಳಾ ಶೆಟ್ಟಿಯವರು ವ್ಯಾಪಾರಿಗಳು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಮಹಿಳೆಯೋರ್ವರು ದೂರು ನೀಡಿದ್ದು ಅದರ ಬಗ್ಗೆ ಮಾಡಲು ಇಲ್ಲಿ ಪೊಲೀಸ್ ಇಲಾಖೆ ಇದೆ. ಕಾನೂನು ಇದೆ. ಈ ರೀತಿ ಇಬ್ಬರನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಲು ಆರೋಪಿಗಳಿಗೆ ಅವಕಾಶ ಕೊಟ್ಟವರು ಯಾರು..? ಇದು ಮನುಷ್ಯತ್ವ ಇರುವವರಿಂದ ಸಾಧ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವ ದೇಶ. ವ್ಯಾಪಾರಿಗಳ ಮೇಲೆ ಚಿತ್ರ ಹಿಂದೆ ನಡೆಸಿದ್ದು ಗಂಭೀರ ಪ್ರಕರಣ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಎರಡೂ ಘಟನೆಯನ್ನು ಪಾರದರ್ಶಕ ತನಿಖೆ ನಡೆಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು. ವ್ಯಾಪಾರಿಗಳ ಮೇಲೆ ಗಂಭೀರ ರೀತಿಯ ಹಲ್ಲೆ ನಡೆಸಿದ ಎಲ್ಲರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು ತಾರತಮ್ಯ ತೋರದೆ ನಿಷ್ಪಕ್ಷಪಾತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದೇನೆ ಎಂದು ಅವರು ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.