ಪುತ್ತೂರು: ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ: ಡಿ ವಿ
ಪುತ್ತೂರು: ಕಳೆದ ಎಂಟು ವರ್ಷಗಳ ಹಿಂದೆ ದೇಶದಲ್ಲಿ 40 ಶೇ. ಬಡವರಿದ್ದರು, ದೇಶದಲ್ಲಿ ಆಡಳಿತ ಬದಲಾವಣೆ ಆದ ಬಳಿಕ ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಬಡತನ ಕಡಿಮೆಯಾಗುತ್ತಲೇ ಬರುತ್ತಿದ್ದು ಕೆಲವೇ ಪರ್ಸೆಂಟ್ ಮಾತ್ರ ದೇಶದಲ್ಲಿ ಬಡವರನ್ನು ಕಾಣಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ , ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.

ಅ.26 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ರೈ ಎಸ್ಟೇಟ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ದಶ ಸಂಭ್ರಮದ ಪ್ರಯುಕ್ತ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಪುತ್ತೂರಿನಲ್ಲಿ ಶಾಸಕನಾದ ಬಳಿಕ ಸಂಸದನಾದೆ, ರಾಜ್ಯದ ಮುಖ್ಯಮಂತ್ರಿಯಾದೆ, ಬಿಜೆಪಿಯಲ್ಲಿ ರಾಷ್ಟ್ರೀಯ ಹುದ್ದೆಯನ್ನು ಪಡೆದುಕೊಂಡೆ ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ ನಾನಿನ್ನು ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಯಾಗಲು ಮಾತ್ರ ಬಾಕಿ ಇದೆ ಉಳಿದ ಎಲ್ಲವನ್ನೂ ಅನುಭವಿಸಿದ್ದೇನೆ ಎಂದು ಹೇಳಿದರು.
ನಾನು ಪುತ್ತೂರಿನಲ್ಲಿ ಶಾಸಕನಾಗಿದ್ದ ವೇಳೆ ಪುತ್ತೂರಿನ ಎಲ್ಲಾ ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ. ಅಕ್ರಮಸಕ್ರಮ ಅರ್ಜಿ ಎಲ್ಲವನ್ನೂ ವಿಲೇವಾರಿ ಮಾಡಿದ್ದೇನೆ ಎಂದು ಹೇಳುವ ಮೂಲಕ ಈಗಿನ ವ್ಯವಸ್ಥೆಯ ಬಗ್ಗೆ ಮೂದಲಿಸುವಂತೆ ಮಾತನಾಡಿದರು.
ಹಲವು ಬಾರಿ ರಾಜ್ಯ ಸರಕಾರದ ನಡೆಯನ್ನು, ಕ್ರಮವನ್ನು ಟೀಕಿಸುವ ಮೂಲಕ ಸುದ್ದಿಯಾಗಿದ್ದ ಡಿ ವಿ ಸದಾನಂದ ಗೌಡರು ಪುತ್ತೂರಿನಲ್ಲಿ ಪರೋಕ್ಷವಾಗಿ ಶಾಸಕರಿಗೆ ಟಾಂಗ್ ನೀಡಿ ಮತನಾಡಿದಂತೆ ಸಭಿಕರಿಗೆ ಭಾಸವಾಯಿತು. ಇದು ರಾಜಕೀಯವೋ, ಆವೇಶವೋ, ಯಾರದೋ ಮೇಲಿನ ಪ್ರೀತಿಯಿಂದಲೋ ಅಥವಾ ಯಾರದೋ ಮೇಲಿನ ದ್ವೇಷದಿಂದ ಅಕ್ರಮಸಕ್ರಮ ಅರ್ಜಿ ವಿಲೇವಾರಿ ಬಗ್ಗೆ ಮಾತನಾಡಿದ್ದಾರೋ ಎಂಬುದು ಯಾರ ಊಹೆಗೂ ನಿಲುಕಲಿಲ್ಲ..