ಅಂತಾರಾಷ್ಟ್ರೀಯಕರಾವಳಿ

ಮೂಡಂಬೈಲು ಡಾ|ರವಿ ಶೆಟ್ಟಿಯವರಿಗೆ ಪ್ರತಿಷ್ಠಿತ ಕಯ್ಯಾರ ಪ್ರಶಸ್ತಿಯ ಗೌರವ

ಪುತ್ತೂರು: ಮೂಡಂಬೈಲು ಡಾ|ರವಿ ಶೆಟ್ಟಿ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕನ್ನಡ ನಾಡು ನುಡಿ ಹಾಗೂ ತುಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಎಟಿಎಸ್ ಕತಾರ್ ಆಡಳಿತ ನಿರ್ದೇಶಕರಾದ ಮೂಡಂಬೈಲು ಡಾ|ರವಿ ಶೆಟ್ಟಿ ಅವರಿಗೆ ಕಯ್ಯಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಜೂ.21 ರಂದು ಕಯ್ಯಾರ ಕಾಮಿಲ್ ಕೊಕ್ಕೇಚಾಲು ಶಾಲಾ ವಠಾರದಲ್ಲಿ ನಡೆದ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಮೂಡಂಬೈಲು ಡಾ|ರವಿ ಶೆಟ್ಟಿ ಮಾತನಾಡಿ ತಮ್ಮ ದೂರದೃಷ್ಟಿಯ ಚಿಂತನೆ, ಅಪ್ಪಟ ಕನ್ನಡ ಪ್ರೇಮ ಹಾಗೂ ಅದ್ಭುತ ಸಾಹಿತ್ಯ ಸೃಷ್ಟಿಯ ಮೂಲಕ ಹೊಸ ಇತಿಹಾಸ ನಿರ್ಮಿಸಿದ ಮತ್ತು ಚದುರಿಹೋದ ಮನಸ್ಸುಗಳನ್ನು ಒಗ್ಗೂಡಿಸಿ ಗಡಿನಾಡಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸಿದ ಶತಾಯುಷಿ ಮಹಾನ್ ಚೇತನರಾದ ನಾಡೋಜ ಕಯ್ಯಾರ ಕಿಂಞಣ್ಣ ರೈ ಅವರ ಬದುಕು ಮತ್ತು ಬರಹ ಸಾರ್ವಕಾಲಿಕವಾಗಿದೆ ಎಂದು ಹೇಳಿದರು. ಡಾ.ಕಯ್ಯಾರ ಕಿಂಞಣ್ಣ ರೈ ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರದಾನವಾಗುವ ಪ್ರತಿಷ್ಠಿತ ‘ಕಯ್ಯಾರ ಪ್ರಶಸ್ತಿ’ಯನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರೊಂದಿಗೆ ಸ್ವೀಕರಿಸುತ್ತಿರುವುದು ನನ್ನ ಪಾಲಿಗೆ ಪ್ರಶಸ್ತಿಗಿಂತಲೂ ಮಿಗಿಲಾದ ಆಶೀರ್ವಾದವಾಗಿದೆ. ಇದು ನಿಜವಾಗಿಯೂ ನನ್ನ ಭಾಗ್ಯ. ನನ್ನ ಸಾಧನೆಗಿಂತಲೂ ಹೆಚ್ಚಾಗಿ, ನನ್ನ ಹೆತ್ತವರು ಮಾಡಿದ ಪುಣ್ಯದ ಫಲವೆಂದು ನಾನು ಭಾವಿಸುತ್ತೇನೆ ಎಂದರು.

 


ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಎಲ್. ಎನ್ ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!