ಕರಾವಳಿಕ್ರೈಂ

ಸುರತ್ಕಲ್: ಡೆತ್ ನೋಟ್ ಬರೆದಿಟ್ಟು ಅಪ್ರಾಪ್ತ ಬಾಲಕಿ ಆತ್ಮಹತ್ಯೆ; ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು


ಸುರತ್ಕಲ್: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೀಶ್ ಪೂಜಾರಿ ಎಂಬಾತನ ವಿರುದ್ಧ ಪೋಕ್ಸೋ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

 



ಎ.23ರಂದು ಸಂಜೆ ಸುಮಾರು 4 ಗಂಟೆಯ ಆಸುಪಾಸಿನಲ್ಲಿ ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತದೇಹದ ಬಳಿ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ ತಾನು “ದೊಡ್ಡ ತಪ್ಪು ಮಾಡಿರುವುದಾಗಿ” ಹಾಗೂ “ಆತ ಸಂತೋಷವಾಗಿದ್ದಾನೆ” ಎಂದು ಬರೆದಿದ್ದಾಳೆ. ಅಲ್ಲದೆ, “ಆತ ಹಿಂದೂ ಸಂಘಟನೆಯಲ್ಲಿದ್ದರೂ ಅವರು ತನಗೆ ಸಹಾಯ ಮಾಡಲಿಲ್ಲ” ಎಂದು ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.


ಘಟನೆ ನಡೆದ ಬಳಿಕ ಬಾಲಕಿಯ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿ ಗರ್ಭಿಣಿಯಾಗಿದ್ದಳು ಮತ್ತು ಆಕೆಯ ಸಾವಿಗೆ ಅನೀಶ್ ಪೂಜಾರಿ ಎಂಬಾತ ಕಾರಣ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ  ಆರೋಪಿ ಅನೀಶ್ ವಿರುದ್ಧ ಪೋಕ್ಸೋ ಕಾಯ್ದೆ, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾಯ್ದೆಗಳಡಿ ಎಫ್.ಐ.ಆರ್ ದಾಖಲಿಸಲಾಗಿದೆ.


ಮೃತರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ವೈದ್ಯರು ಭ್ರೂಣದ ಮಾದರಿಯನ್ನು ಡಿಎನ್ಎ 0ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಅನೀಶ್ ಪೂಜಾರಿಯನ್ನು ಬಂಧಿಸಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದ್ದು, ಹುಡುಕಾಟ ತೀವ್ರಗೊಂಡಿದೆ. ಸುರತ್ಕಲ್ ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!