ವೃದ್ಧೆಯ ಮೇಲೆ ಹಲ್ಲೆ ಮಾಡಿ 3 ಲಕ್ಷ ರೂ ಮೌಲ್ಯದ ಚಿನ್ನ ದರೋಡೆ: ಇಬ್ಬರ ಬಂಧನ
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 76 ವರ್ಷದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 3ರಂದು ಮಧ್ಯಾಹ್ನ 1.15ರ ಸುಮಾರಿಗೆ ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಆರೋಪಿಗಳು ಬಾಗಿಲು ಬಡಿದಿದ್ದಾರೆ. ಮನೆ ಬಾಡಿಗೆಗೆ ಬೇಕೆಂದು ಮಾತನಾಡುತ್ತಾ ಒಳನುಗ್ಗಿದ ಆರೋಪಿಗಳು, ವೃದ್ಧೆಯನ್ನು ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿ ಆಕೆಯ ಬಳಿಯಿದ್ದ ಚಿನ್ನದ ಸರ ಹಾಗೂ ಬಳೆಯನ್ನು ದೋಚಿಕೊಂಡು ಪರಾರಿಯಾಗಿದ್ದರು. ದೋಚಲಾದ ಚಿನ್ನಾಭರಣದ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ₹3 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಖಚಿತ ಮಾಹಿತಿ ಆಧರಿಸಿ ಆಗಸ್ಟ್ 7ರಂದು ಮರೋಳಿ ಪ್ರದೇಶದಲ್ಲಿ ಬಾಲ ಸುಬ್ರಮಣ್ಯ (49) ಹಾಗೂ ಶ್ಯಾಮ್ ಕುಮಾರ್ (33) ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ದೋಚಲಾದ ಸಂಪೂರ್ಣ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆಯೂ ಬಜಪೆ, ಮುಲ್ಕಿ, ಮಂಗಳೂರು ಪೂರ್ವ, ಮಂಗಳೂರು ಉತ್ತರ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಮತ್ತು ಕಳವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ನಡೆದಿದ್ದು, ಉಳ್ಳಾಲ ಹಾಗೂ ಕೊಣಾಜೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



